Saturday 13 January 2018

ಮಕರ ಸಂಕ್ರಾಂತಿ



ಮಕರಸಂಕ್ರಾಂತಿಯ ಹಿನ್ನೆಲೆಯಲ್ಲಿ ಸಂಕ್ರಾಂತಿ-ಉತ್ತರಾಯಣಗಳ ವಿಭಿನ್ನ ವಿಶೇಷತೆಗಳ ಬಗ್ಗೆ ಮಾಹಿತಿಯೀಯುವ ನನ್ನ ಕೆಲವು ಕಿರುಬರಹಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ :-)

ಸೂರ್ಯನ ಉತ್ತರಾಭಿಮುಖ ಗಮನ ಉತ್ತರಾಯಣವೆಂದೂ ದಕ್ಷಿಣಾಭಿಮುಖ ಗಮನ ದಕ್ಷಿಣಾಯನವೆಂದೂ ಹೆಸರಿಸಲ್ಪಟ್ಟಿರುವುದು ಪ್ರಾಯಃ ಎಲ್ಲರಿಗೂ ತಿಳಿದದ್ದೇ. ಇದರ ಅಭಿಪ್ರಾಯವಿಷ್ಟು - ರವಿಯು ಮಕರಾದಿ ಆರು ರಾಶಿಗಳಲ್ಲಿರುವಾಗ ಪೂರ್ವದಿಕ್ಕಿನಲ್ಲಿ ಆತನು ಉದಿಸುವ ಬಿಂದು ಪ್ರತಿದಿನ ಉತ್ತರೋತ್ತರಕ್ಕೆ ಹೋಗುವುದರಿಂದ ಆ ಆರು ತಿಂಗಳುಗಳ ಕಾಲಕ್ಕೆ ಉತ್ತರಾಯಣವೆಂದು ಹೆಸರು. ಇನ್ನು, ಕರ್ಕಾಟಕಾದಿ ಆರು ರಾಶಿಗಳಲ್ಲಿರುವಾಗ ಸೂರ್ಯೋದಯಬಿಂದುಗಳು ಪ್ರತಿದಿನವೂ ದಕ್ಷಿಣಕ್ಕೆ ಹೋಗುವುದರಿಂದ ಆ ಆರು ತಿಂಗಳುಗಳ ಕಾಲಕ್ಕೆ ದಕ್ಷಿಣಾಯನವೆಂದು ಹೆಸರು. ದೇವತೆಗಳಿಗೆ ಉತ್ತರಾಯಣ ಹಗಲು, ದಕ್ಷಿಣಾಯನ ರಾತ್ರಿ - ಎಂಬುದಾಗಿ ಶಾಸ್ತ್ರಗಳು ಹೇಳುವುದರಿಂದ, ಉಪನಯನ ದೇವತಾಪ್ರತಿಷ್ಠೆ - ಇತ್ಯಾದಿ ಕೆಲವೊಂದು ಶುಭಕರ್ಮಗಳಿಗೆ ಉತ್ತರಾಯಣವೇ ಆಗಬೇಕು. ಇಚ್ಛಾಮರಣಿಯಾದ ಭೀಷ್ಮನು ಉತ್ತರಾಯಣವನ್ನು ಪ್ರತೀಕ್ಷಿಸುತ್ತಾ ಶರಶಯ್ಯೆಯಲ್ಲಿ ಪವಡಿಸಿ, ತದನಂತರ ನಿರ್ಯಾಣಗೈದ ಮಹಾಭಾರತಕಥೆಯೂ ಪ್ರಸಿದ್ಧ. ಇಂತಹ ಉತ್ತರಾಯಣದ ಆರಂಭಕಾಲವಾದದ್ದರಿಂದಲೇ ಈ ಮಕರಸಂಕ್ರಮಣಕ್ಕೆ ಎಲ್ಲಿಲ್ಲದ ಮಹತ್ತ್ವ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ದೇವತೆಗಳಿಗೆ ಸೂರ್ಯೋದಯಕಾಲ!

ಲಗಧಮುನಿಪ್ರಣೀತ ವೇದಾಂಗಜ್ಯೋತಿಷ ಗ್ರಂಥದಲ್ಲಿ (ಕ್ರಿ.ಪೂ. ಸುಮಾರು ೧೪ನೇ ಶತಮಾನ) ರವಿಯು ಧನಿಷ್ಠಾನಕ್ಷತ್ರಕ್ಕೆ ಬಂದಾಗ ಉತ್ತರಾಯಣಾರಂಭ ಎಂದಿದೆ. ಮಕರಾದಿಗೂ ಧನಿಷ್ಠಾದಿಗೂ ಇರುವ ಅಂತರ ಸುಮಾರು ೧೭ ದಿನಗಳು. ಅರ್ಥಾತ್, ಲಗಧಮುನಿ ಪ್ರಕಾರ ಉತ್ತರಾಯಣ ಆರಂಭವಾಗುವುದು ಫೆಬ್ರವರಿ ೨ನೇ ದಿನಾಂಕದ ಆಸುಪಾಸಿನಲ್ಲಿ. ಪರಾಶರತಂತ್ರದಲ್ಲಿಯೂ ಇದನ್ನೇ ಹೇಳಿದೆ. ವೇದಗಳಲ್ಲಿ ಕೆಲವೆಡೆ ಧನಿಷ್ಠಾದಿಯಾಗಿ ನಕ್ಷತ್ರಗಣನೆಯಿರುವುದಕ್ಕೂ ಇದನ್ನೇ ಕಾರಣವನ್ನಾಗಿ ತೋರಿಸಿದ್ದಾರೆ ವ್ಯಾಖ್ಯಾತೃಗಳು. ಇದರ ಕುರಿತಾಗಿ ಬೃಹತ್ಸಂಹಿತೆಯಲ್ಲಿ ವರಾಹಮಿಹಿರನ ನುಡಿ ಇಂತಿದೆ - “ಧನಿಷ್ಠಾದಿಯಿಂದ ಸೂರ್ಯನ ಉತ್ತರಗಮನವೂ ಆಶ್ಲೇಷಾರ್ಧದಿಂದ ದಕ್ಷಿಣಗಮನವೂ ಎಂದೋ ಆಗುತ್ತಿತ್ತು. ಆದ್ದರಿಂದ ಪೂರ್ವಶಾಸ್ತ್ರಗ್ರಂಥಗಳಲ್ಲಿ ಹೀಗೆ ಉಲ್ಲಿಖಿತವಾಗಿದೆ. ಈಗ ಮಕರಾದಿಯಿಂದ ಉತ್ತರಗಮನವೂ ಕರ್ಕಾಟಕಾದಿಯಿಂದ ದಕ್ಷಿಣಗಮನವೂ ಆರಂಭಗೊಳ್ಳುತ್ತಿವೆ. ಪ್ರತ್ಯಕ್ಷಪರೀಕ್ಷಣೆಗಳಿಂದ ಇದು ಸ್ಫುಟವಾಗುತ್ತದೆ.” ಹೀಗೆ ಸಂಶಯವನ್ನು ಪರಿಹರಿಸಿ ಮುಂದಕ್ಕೆ ಅದರ ಪರೀಕ್ಷಣೆಯ ವಿಧಿಯನ್ನೂ ತಿಳಿಸುತ್ತಾನೆ ಆಚಾರ್ಯ ವರಾಹಮಿಹಿರ. ಇಂತಹ ಸ್ಪಷ್ಟ ಅಯನಾರಂಭ ಕಾಲವನ್ನು ನಿಖರವಾಗಿ ಸಾಧಿಸುವ ಗಣಿತವಿಧಿಗಳೂ ಜ್ಯೋತಿಷಗ್ರಂಥಗಳಲ್ಲಿ ಹೇಳಲ್ಪಟ್ಟಿವೆ.

ಅತ್ಯುತ್ತಮ ಸಂಶೋಧಕರೂ ಆಗಿದ್ದ ಬಾಲಗಂಗಾಧರ ತಿಲಕರು ಸಮಗ್ರ ವೈದಿಕ ಸಾಹಿತ್ಯವನ್ನು ಆಮೂಲಚೂಲ ಅವಲೋಕಿಸಿ, ವೈದಿಕಯುಗದಲ್ಲಿ ರವಿಯು ಪೂರ್ವಾಭಾದ್ರಾನಕ್ಷತ್ರಕ್ಕೆ ಪ್ರವೇಶಿಸಿದಾಗ ಉತ್ತರಾಯಣಾರಂಭವೂ, ಮೃಗಶಿರಾನಕ್ಷತ್ರದಲ್ಲಿರುವಾಗ ವಿಷುವದ್ದಿನವೂ ಆಗುತ್ತಿತ್ತೆಂದು ಅಭಿಪ್ರಾಯಪಟ್ಟಿದಾರೆ. ಯಾವ ದಿನ ಹಗಲು ಮತ್ತು ಇರುಳು ಪರಸ್ಪರ ಸಮಪ್ರಮಾಣದಲ್ಲಿರುವುದೋ ಅದು ವಿಷುವದ್ದಿನ (equinox). ಈ ಎಲ್ಲಾ ಮಾಹಿತಿಗಳನ್ನೂ ಕಲೆಹಾಕಿದಾಗ, ಉತ್ತರಾಯಣವು ಪೂರ್ವಾಭಾದ್ರಾದಿ, ಧನಿಷ್ಠಾದಿ ಮತ್ತು ಮಕರಾದಿ - ಹೀಗೆ ಮೂರು ವಿಭಿನ್ನ ಕಾಲಘಟ್ಟಗಳು ಸಿಗುತ್ತವೆ. ಇದರಿಂದ, ನಮ್ಮ ಪೂರ್ವಜರು ಯಾವುದೇ ಸಿದ್ಧಾಂತಕ್ಕೆ ಜೋತು ಬೀಳದೆ, ಆಯಾ ಕಾಲದಲ್ಲಿ ಪರೀಕ್ಷಿಸಿ ಅಯನಾರಂಭಕಾಲವನ್ನು ನಿರ್ಣಯಿಸಿಕೊಳ್ಳುತ್ತಿದ್ದರೆಂಬುದು ಸುವೇದ್ಯವಾಗುತ್ತದೆ. ಅಷ್ಟೇ ಅಲ್ಲದೆ, ಸೂರ್ಯಚಂದ್ರಾದಿಗಳ ಸ್ಥಿತಿಗತಿಗಳನ್ನು ಆಧರಿಸಿ ಸಯುಕ್ತಿಕವಾಗಿ ಕಾಲನಿರ್ಣಯಗೈಯುವ  ಮತ್ತು ಕಾಲಕಾಲಕ್ಕೆ ಅಪೇಕ್ಷಿತ ಪರಿಷ್ಕರಣೆಗಳನ್ನೂ ಮಾಡುವ ಪದ್ಧತಿ ನಮ್ಮಲ್ಲಿ ಸುದೀರ್ಘ ಕಾಲದಿಂದ ಇದ್ದಿತ್ತೆಂಬುದೂ ಸ್ಫುಟವಾಗುತ್ತದೆ.

ವರಾಹಮಿಹಿರರು ಹೇಳಿದ ಅಯನಪರೀಕ್ಷಣವಿಧಿ ಇಂತಿದೆ - ಪೂರ್ವದಿಕ್ಕಿನಲ್ಲಿ ದೂರದಲ್ಲಿರುವ ಒಂದು ಮರವನ್ನೋ ಕಂಬವನ್ನೋ ಗುರುತಾಗಿರಿಸಿಕೊಂಡು, ಒಂದೇ ಸ್ಥಳದಿಂದ ಪ್ರತಿದಿನವೂ ಸೂರ್ಯೋದಯವನ್ನು ಗಮನಿಸುತ್ತಿರಬೇಕು. (ಹೀಗೆಯೇ ಪಶ್ಚಿಮದಿಕ್ಕಿನಲ್ಲಿ ಸೂರ್ಯಾಸ್ತವನ್ನು ಕೂಡಾ.) ಹೀಗೆ ಗಮನಿಸಿದಾಗ, ಸೂರ್ಯನು ದಿನದಿಂದ ದಿನಕ್ಕೆ ಆ ಗುರುತಿನ ಸಮೀಪಕ್ಕೋ ದೂರಕ್ಕೋ ಸರಿಯುತ್ತಿರುವುದನ್ನು ಕಾಣಬಹುದು. ಹೀಗೆಯೇ, ಪಂಚಾಂಗದಲ್ಲಿ ಉಲ್ಲೇಖಿಸಿರುವ ಉತ್ತರಾಯಣಾರಂಭದಿನಕ್ಕಿಂತ ಒಂದು ವಾರ ಮುಂಚಿತವಾಗಿ ಗಮನಿಸುವುದನ್ನು ಆರಂಭಿಸಿದರೆ, ಸೂರ್ಯನ ಉದಯಬಿಂದು ಪ್ರತಿದಿನ ದಕ್ಷಿಣದಿಕ್ಕಿನೆಡೆಗೆ ಸರಿಯುತ್ತಾ, ಉತ್ತರಾಯಣಾರಂಭದಿನದ ಅನಂತರ ಅದು ಉತ್ತರದ ಕಡೆಗೆ ಹೊರಳುವುದನ್ನು ಕಾಣಬಹುದು. ಒಂದು ವೇಳೆ ಪಂಚಾಂಗದಲ್ಲಿ ಹೇಳಿದ ಉತ್ತರಾಯಣಾರಂಭದಿನದಂದೇ ಸೂರ್ಯನ ಉತ್ತರಗಮನಾರಂಭ ಆಗದೆಯೇ, ಅದಕ್ಕಿಂತ ಕೆಲ ದಿನಗಳ ಮೊದಲು ಅಥವಾ ಅನಂತರ ಆದಲ್ಲಿ, ಈ ಪ್ರತ್ಯಕ್ಷಸಿದ್ಧಿಯ ಆಧಾರದ ಮೇಲೆ ಪಂಚಾಂಗಗಣಿತವನ್ನು ಪರಿಷ್ಕರಿಸಿಕೊಳ್ಳಬೇಕೆಂದು ವರಾಹಮಿಹಿರಭಾಸ್ಕರಾಚಾರ್ಯರೇ ಮೊದಲಾದ ಎಲ್ಲಾ ಶಾಸ್ತ್ರಕರ್ತರು ಏಕಕಂಠದಿಂದ ಸಾರಿದ್ದಾರೆ.

ವಸ್ತುತಃ ಈ ಕಾಲದಲ್ಲಿ ಡಿಸೆಂಬರ್ ೨೨ರಂದೇ ಉತ್ತರಾಯಣಾರಂಭವಾಗುತ್ತಿದೆಯೆಂಬುದು ಹಿಂದೆ ಹೇಳಿದ ಪರೀಕ್ಷಣೆಯಿಂದ ತಿಳಿದುಬರುತ್ತದೆ. ಜ್ಯೋತಿಃಶಾಸ್ತ್ರವು ಹೇಳುವ ಗೋಲಯುಕ್ತಿಗಳು ಮತ್ತು ತದಾಧಾರಿತ ಗಣಿತವಿಧಿಗಳಿಂದಲೂ ಸಿದ್ಧವಾಗುತ್ತಿರುವ ತಥ್ಯ ಇದುವೇ. ಆದ್ದರಿಂದ ಅಂದಿನಿಂದಲೇ ಉತ್ತರಾಯಣಾರಂಭವೆಂದು ಪರಿಗಣಿಸುವುದು ಸಮುಚಿತ. ಈ ವಿಷಯದಲ್ಲಿ ವೇದಗಳೂ ಪ್ರತ್ಯಕ್ಷಸಿದ್ಧಿಗೇ ಮಾನ್ಯತೆಯಿತ್ತಿವೆಯೆಂಬುದನ್ನೂ ನಾವು ನೋಡಿರುವುದರಿಂದ ಈ ಪಕ್ಷ ಶ್ರುತಿಸಮ್ಮತವೂ ಹೌದು. ಇದನ್ನನುಸರಿಸಿಯೇ ಧರ್ಮಕರ್ಮಗಳ ಕಾಲನಿರ್ಣಯಗೈದಲ್ಲಿ ‘ಪ್ರತ್ಯಕ್ಷಂ ಜ್ಯೋತಿಷಂ ಶಾಸ್ತ್ರಮ್’ ಎಂಬ ಮಾತು ಕೇವಲ ಸ್ತುತಿಯಾಗಿಯೇ ಉಳಿಯದೆ ಅನ್ವರ್ಥವೂ ಆಗುತ್ತದೆ. ಇದನ್ನು ಮನಗಂಡಿರುವ ಹಲವಾರು ಪಂಚಾಂಗಕರ್ತರಿಂದ ಮಕರಸಂಕ್ರಮಣಕ್ಕೆ ಬಹುಪೂರ್ವದಲ್ಲಿಯೇ ಉತ್ತರಾಯಣಾರಂಭ ಉಲ್ಲಿಖಿತವಾಗುತ್ತಿರುವುದನ್ನು ನಾವು ಕಾಣಬಹುದು. ಆದರೆ, ಕೆಲವೊಂದು ಧರ್ಮಶಾಸ್ತ್ರಜ್ಞರು ಇದಕ್ಕೆ ಸಮ್ಮತಿಸುವುದಿಲ್ಲ. ಶಾಸ್ತ್ರವಾಕ್ಯಗಳ ವಾಚ್ಯಾರ್ಥವನ್ನಷ್ಟೇ ನೋಡದೆ, ಅವುಗಳ ಹೃದಯವನ್ನೂ ಅರ್ಥೈಸಿಕೊಂಡರೆ ಗೊಂದಲ ಪರಿಹೃತವಾದೀತು.  

ಸಂಕ್ರಮಣ ಅಥವಾ ಸಂಕ್ರಾಂತಿ ಎಂದರೆ ದಾಟುವುದು. ಸೂರ್ಯನು ಒಂದು ರಾಶಿಯನ್ನು ದಾಟಿ ಇನ್ನೊಂದು ರಾಶಿಯನ್ನು ಪ್ರವೇಶಿಸುವುದನ್ನೇ ನಾವು ಸಂಕ್ರಮಣವೆನ್ನುತ್ತೇವೆ. ಅವನು ಮೇಷವನ್ನು ಪ್ರವೇಶಿಸಿದರೆ ಅದು ಮೇಷಸಂಕ್ರಾಂತಿ. ಅಂತೆಯೇ ಅದನ್ನು ದಾಟಿ ವೃಷಭಕ್ಕೆ ಬರುವುದನ್ನು ವೃಷಭಸಂಕ್ರಾಂತಿಯೆನ್ನುತ್ತೇವೆ. ಒಂದೊಂದು ರಾಶಿಯಲ್ಲಿ ಒಂದೊಂದು ತಿಂಗಳು ಅವನ ವಾಸ. ಅದನ್ನೇ ಕ್ರಮವಾಗಿ ಮೇಷಮಾಸ ವೃಷಭಮಾಸ ಇತ್ಯಾದಿಯಾಗಿ ಹೆಸರಿಸುತ್ತೇವೆ. ಒಟ್ಟು ೧೨ ರಾಶಿಗಳಿರುವುದರಿಂದ ವರ್ಷಕ್ಕೆ ೧೨ ಸಂಕ್ರಾಂತಿಗಳು. ಯಾವ ಸಮಯದಲ್ಲಿ ಸಂಕ್ರಮಣವಾಗುತ್ತದೆಯೋ ಅದರ ಹಿಂದೆ ಮತ್ತು ಮುಂದೆ ತಲಾ ೧೬ ಗಳಿಗೆಗಳನ್ನು ‘ಪುಣ್ಯಕಾಲ’ವೆಂದು ಧರ್ಮಶಾಸ್ತ್ರಗಳು ಪರಿಗಣಿಸಿವೆ. (ಒಂದು ಗಳಿಗೆಯೆಂದರೆ ೨೪ ನಿಮಿಷಗಳು.) ಈ ಪುಣ್ಯಕಾಲ ಎಲ್ಲಾ ಸಂಕ್ರಮಣಗಳಿಗೂ ಸಾಮಾನ್ಯ. ಇದರಲ್ಲಿ ವಿವಾಹಾದಿ ಶುಭಕರ್ಮಗಳನ್ನು ಮಾಡಕೂಡದು. ಆದರೆ, ತೀರ್ಥಸ್ನಾನ, ಜಪ, ದಾನ - ಇತ್ಯಾದಿ ಪುಣ್ಯಕರ್ಮಗಳು ಈ ಕಾಲದಲ್ಲಿ ಆಚರಿಸಲ್ಪಟ್ಟರೆ ಬಹುಗುಣಿತ ಫಲ ಕೊಡುವುದರಿಂದ ಇದಕ್ಕೆ ಪುಣ್ಯಕಾಲವೆಂದು ಹೆಸರು. ವಸ್ತುತಃ ಸೂರ್ಯನಷ್ಟೇ ಅಲ್ಲದೆ ಇತರ ಗ್ರಹಗಳೂ ರಾಶಿಯಿಂದ ರಾಶಿಗೆ ಹೋಗುವುದರಿಂದ ಸಂಕ್ರಾಂತಿ ಎಲ್ಲಾ ಗ್ರಹರಿಗೂ ಇದೆ. ಆದರೆ, ‘ರವೇಸ್ತು ತಾಃ ಪುಣ್ಯತಮಾಃ’ ಇತ್ಯಾದಿ ವಾಕ್ಯಗಳು ಸೂರ್ಯಸಂಕ್ರಾಂತಿಯನ್ನಷ್ಟೇ ಪುಣ್ಯಕಾಲವನ್ನಾಗಿ ಹೇಳಿರುವುದರಿಂದ ಇತರಸಂಕ್ರಾತಿಗಳಿಗೆ ಧರ್ಮಕರ್ಮಗಳಲ್ಲಿ ಪ್ರಾಮುಖ್ಯವಿಲ್ಲ.

ಇಲ್ಲಿ ೧೬ ಗಳಿಗೆಗಳನ್ನು ಪುಣ್ಯಕಾಲವೆಂದು ಪರಿಗಣಿಸುವುದಕ್ಕೂ ಗಣಿತಯುಕ್ತಿಯಿದೆ. ಸೂರ್ಯಬಿಂಬದ ಸರಾಸರಿ ವ್ಯಾಸಪ್ರಮಾಣ ೩೨ ಕಲೆಗಳು. ಸಂಕ್ರಮಣವೆಂದು ಪಂಚಾಂಗದಲ್ಲಿ ನಿರ್ದೇಶಿಸುವುದು ರವಿಬಿಂಬಮಧ್ಯವು ರಾಶಿಗಳೆರಡರ ಸಂಧಿಯಲ್ಲಿರುವ ಕಾಲವನ್ನು. ಅಂದರೆ, ರವಿಬಿಂಬದ ಪೂರ್ವಾರ್ಧರೂಪವಾದ ೧೬ ಕಲೆಗಳು ಅದಕ್ಕೆ ಮೊದಲೇ ಸಂಕ್ರಮಿಸಿವೆ. ಉತ್ತರಾರ್ಧರೂಪವಾದ ಇನ್ನುಳಿದ ೧೬ ಕಲೆಗಳು ಅನಂತರವಷ್ಟೇ ಸಂಕ್ರಮಿಸಬೇಕು. ರವಿಯು ಕ್ರಾಂತಿವೃತ್ತದಲ್ಲಿ ಒಂದು ಕಲೆಯನ್ನು ಕ್ರಮಿಸಲು ಬೇಕಾಗುವ ಕಾಲ ಸಾಧಾರಣವಾಗಿ ಒಂದು ಗಳಿಗೆ. ಆದ್ದರಿಂದ ರವಿಬಿಂಬದ ಪೂರ್ವಾರ್ಧ-ಅಪರಾರ್ಧರೂಪವಾದ ತಲಾ ೧೬ ಕಲೆಗಳು ಸಂಕ್ರಮಿಸುವುದು ಕ್ರಮವಾಗಿ ಪಂಚಾಂಗದಲ್ಲಿ ಹೇಳಿದ ಸಂಕ್ರಾಂತಿಕಾಲಕ್ಕಿಂತ ೧೬ ಗಳಿಗೆಗಳಷ್ಟು ಮೊದಲು ಮತ್ತು ಅನಂತರದಲ್ಲಿ. ಹೀಗೆ ಒಟ್ಟು ೩೨ ಗಳಿಗೆಗಳ ಕಾಲ ನಿರಂತರವಾಗಿ ರವಿಬಿಂಬ ಮುಂದಿನ ರಾಶಿಯನ್ನು ಹೊಗುತ್ತಿರುವುದರಿಂದ, ಅಷ್ಟುಕಾಲವೂ ಪುಣ್ಯಕಾಲವೆಂದು ಪರಿಗಣಿತವಾಗಿದೆ. ಇಲ್ಲಿಯೂ ಸ್ಥೂಲಸೂಕ್ಷ್ಮಭೇದವಿದೆ. ಹಿಂದೆ ಕಾಣಿಸಿದ ಯುಕ್ತಿಯ ಪ್ರಕಾರ, ರವಿಯ ಸರಾಸರಿ ಬಿಂಬಮಾನ ಮತ್ತು ಗತಿಯನ್ನಿಟ್ಟಿಕೊಂಡು ಪುಣ್ಯಕಾಲವನ್ನು ನಿರ್ಣಯಿಸಿದ್ದು ತಾನೇ! ಆದರೆ, ಅವೆರಡೂ ಪ್ರತಿದಿನವೂ ಬದಲಾಗುತ್ತಿರುತ್ತವೆ. ಆದ್ದರಿಂದ ಸ್ಪಷ್ಟ ಪುಣ್ಯಕಾಲ ಬೇಕಾಗಿದ್ದಲ್ಲಿ ರವಿಯ ಆ ದಿನದ ಸ್ಪಷ್ಟ ಬಿಂಬಪ್ರಮಾಣವನ್ನು ೬೦ರಿಂದ ಗುಣಿಸಿ ಆ ದಿನದ ಸ್ಪಷ್ಟಗತಿಯಿಂದ ಭಾಗಿಸಿದಲ್ಲಿ ಸ್ಫುಟವಾದ ಪುಣ್ಯಕಾಲ ಸಿಗುತ್ತದೆ. ಇದರಿಂದಲೂ, ಖಗೋಲಾಧಾರಿತ ಕಾಲನಿರ್ಣಯದಲ್ಲಿನ ನಮ್ಮ ಪೂರ್ವಜರ ಸೂಕ್ಷ್ಮಜ್ಞತೆ ಅರಿವಾಗದಿರದು.

ಸ್ನಾನ-ದಾನ-ಜಪ-ಶ್ರಾದ್ಧಗಳು ಎಲ್ಲಾ ಸಂಕ್ರಾಂತಿಗಳಲ್ಲಿ ಶಾಸ್ತ್ರವಿಹಿತವಾದ ಕರ್ತವ್ಯಗಳು. ಸಂಕ್ರಾಂತಿ ರಾತ್ರಿಯಲ್ಲಿಯೂ ಆಗಬಹುದು. ಆದರೆ, ‘ರಾತ್ರೌ ಸ್ನಾನಂ ನ ಕುರ್ವೀತ ದಾನಂ ಚೈವ ವಿಶೇಷತಃ’ - ಇತ್ಯಾದಿ ಧರ್ಮಶಾಸ್ತ್ರವಚನಗಳ ಪ್ರಕಾರ ರಾತ್ರಿಯಲ್ಲಿ ಸ್ನಾನ-ದಾನಗಳು ನಿಷಿದ್ಧ. ಆದ್ದರಿಂದ, ಇರುಳಲ್ಲಿ ಸಂಕ್ರಾಂತಿಯಾದ ಪ್ರಸಂಗದಲ್ಲಿ ಪುಣ್ಯಕಾಲನಿರ್ಣಯಕ್ಕೆ ಬೇರೆಬೇರೆ ಕ್ರಮಗಳನ್ನು ಹೇಳಿದ್ದಾರೆ. ಮಧ್ಯರಾತ್ರಿಗಿಂತ ಮೊದಲು ಸಂಕ್ರಾಂತಿಯಾದರೆ, ಹಿಂದಿನ ದಿನದ ಮಧ್ಯಾಹ್ನದ ನಂತರ ಪುಣ್ಯಕಾಲ. ಮಧ್ಯರಾತ್ರಿಯ ನಂತರವಾದರೆ, ಮರುದಿನದ ಪೂರ್ವಾಹ್ಣದಲ್ಲಿ ಸ್ನಾನ-ದಾನಾದಿಗಳ ಆರಚಣೆ. ಆದರೆ ಮಕರಸಂಕ್ರಾಂತಿಯಲ್ಲಿ ಇನ್ನೊಂದು ವಿಶೇಷವಿದೆ. ಅದು ಮಧ್ಯರಾತ್ರಿಗಿಂತ ಮೊದಲೇ ಆದರೂ ಕೂಡಾ, ಮರುದಿನ ಉತ್ತರಾಯಣ ಆರಂಭವಾಗುವುದರಿಂದ ಅದರ ಪೂರ್ವಾರ್ಧವೇ ಪುಣ್ಯಕಾಲ. ಇನ್ನೂ ಸ್ವಾರಸ್ಯವೆಂದರೆ, ರಾತ್ರಿಯಲ್ಲಿ ಗ್ರಹಣವಾದರೆ, ಆ ರಾತ್ರಿಯಲ್ಲಿಯೇ ಸ್ನಾನದಾನಗಳನ್ನು ಮಾಡಬೇಕು. ಸಂಕ್ರಾಂತಿ ನಿತ್ಯಕರ್ಮ. ಆದರೆ ಗ್ರಹಣ ನೈಮಿತ್ತಿಕಕರ್ಮ. ರಾತ್ರಿಯಲ್ಲಿ ಸ್ನಾನದಾನಾದಿಗಳಿಗೆ ಹೇಳಿರುವ ನಿಷೇಧ ನಿತ್ಯಕರ್ಮಗಳಿಗಷ್ಟೇ ಹೊರತು ನೈಮಿತ್ತಿಕಕರ್ಮಗಳಿಗಲ್ಲ. ‘ಅಯ್ಯೋ! ಇದೆಲ್ಲ ಯಾರಿಗೆ ಬೇಕು ಸ್ವಾಮಿ?’ ಎಂದನ್ನಿಸಬಹುದು. ಆದರೆ, ಇದೆಲ್ಲವನ್ನೂ ಅನುಸರಿಸುತ್ತಾ, ಶ್ರದ್ಧೆಯಿಂದ ಆಚರಿಸುವ ಆಸ್ತಿಕರು ಈಗಲೂ ಹಲವರಿದ್ದಾರೆ. ‘ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಂ’ ಎಂಬ ಗೀತಾಚಾರ್ಯನ ಮಾತು ಮನನೀಯ.

ವರ್ಷದ ೧೨ ಸಂಕ್ರಾಂತಿಗಳಲ್ಲಿ ಮೇಷ, ಕರ್ಕಾಟಕ, ತುಲಾ ಮತ್ತು ಮಕರ ಸಂಕ್ರಾಂತಿಗಳು ಹೆಚ್ಚು ವಿಶಿಷ್ಟವಾದವುಗಳು. ಮೇಷ ಮತ್ತು ತುಲಾ ಸಂಕ್ರಾಂತಿಗಳಿಗೆ ವಿಷುವತ್ ಎಂದು ಹೆಸರು. ಈ ಸಂಕ್ರಾಂತಿಯ ದಿನಕ್ಕೆ ವಿಷುವದ್ದಿನವೆಂದು ಹೆಸರು. ಹಗಲು ಮತ್ತು ಇರುಳು ಪರಸ್ಪರ ಸಮಾನಪ್ರಮಾಣದಿಂದಿರುವುದು ಈ ದಿನಗಳ ವೈಶಿಷ್ಟ್ಯ. ಸಾಯನಪದ್ಧತಿಗನುಸಾರ ಈ ದಿನಗಳು ಕ್ರಮವಾಗಿ ಮಾರ್ಚ್ ೨೧ ಹಾಗೂ ಸೆಪ್ಟೆಂಬರ್ ೨೧ ರಂದು ಬರುತ್ತವೆ. ಇವುಗಳಿಗೆ ಕ್ರಮವಾಗಿ ವಸಂತವಿಷುವ (Spring Equinox) ಮತ್ತು ಶರದ್ವಿಷುವ (Autumnal Equinox) ಎಂದು ಹೆಸರು. ಇನ್ನು ಕರ್ಕಾಟಕ ಮತ್ತು ಮಕರ ಸಂಕ್ರಾಂತಿಗಳು ಅಯನಪರಿವರ್ತನೆಯ ದಿನಗಳಾದ್ದರಿಂದ ಇವುಗಳಿಗೆ ಅಯನಸಂಕ್ರಾಂತಿಯೆಂದು ಹೆಸರು. ವರ್ಷದ ಅತ್ಯಂತ ದೀರ್ಘವಾದ ಹಗಲು ಸಿಗುವುದು ದಕ್ಷಿಣಾಯನದ ಆರಂಭಕಾಲವಾದ ಸಾಯನ ಕರ್ಕಾಟಕ ಸಂಕ್ರಾಂತಿಯ ದಿನದಂದು. ಜೂನ್ ೨೧ರಂದು ಬರುವ ಈ ದಿನಕ್ಕೆ summer solstice ಎಂದು ಆಧುನಿಕರಿತ್ತಿರುವ ಹೆಸರು. ಅಂತೆಯೇ, ಉತ್ತರಾಯಣ ಆರಂಭವಾಗುವ ಸಾಯನ ಮಕರ ಸಂಕ್ರಾಂತಿಯ ದಿನ ಹಗಲಿನ ಪ್ರಮಾಣ ಅತ್ಯಂತ ಕನಿಷ್ಠವಾಗಿರುತ್ತದೆ. ಈಗ, ಡಿಸೆಂಬರ್ ೨೧ನೇ ದಿನಾಂಕದಂದು ಬರುವ ಈ ದಿನ winter solstice ಎಂಬ ಹೆಸರಿನಿಂದ ಪ್ರಸಿದ್ಧ. ಇವುಗಳ ವಿವರಣೆಯಷ್ಟೇ ಅಲ್ಲದೆ ಅಲ್ಲದೆ, ಈ ದಿನರಾತ್ರಿಪ್ರಮಾಣಗಳು ಬೇರೆಬೇರೆ ದೇಶಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ವಿಭಿನ್ನವಾಗಿದ್ದರೂ ನಿಖರವಾಗಿ ಸಾಧಿಸಿಕೊಡುವ ಗಣಿತಸೂತ್ರಗಳನ್ನು ನೀಡಿರುವುದು ನಮ್ಮ ಜ್ಯೋತಿಃಶಾಸ್ತ್ರದ ಹಿರಿಮೆ.

ಉತ್ತರಾಯಣಾರಂಭದಿನದಂದು (ಡಿಸೆಂಬರ್ ೨೧) ಹಗಲು ಅತ್ಯಂತ ಕಿರಿದಾಗಿರುತ್ತದೆ. ಮುಂದಿನ ದಿನಗಳಲ್ಲಿ ಕ್ರಮೇಣ ಹಗಲಿನ ಪ್ರಮಾಣ ಹೆಚ್ಚಾಗುತ್ತಾ, ರಾತ್ರಿಯ ಪ್ರಮಾಣ ಕಡಮೆಯಾಗುತ್ತಾ, ವಿಷುವದ್ದಿನ (ಮಾರ್ಚ್ ೨೧) ದಂದು ದಿನರಾತ್ರಿಗಳು ಪರಸ್ಪರ ಸಮಾನಪ್ರಮಾಣವಾಗಿರುತ್ತವೆ (೧೨ ಗಂಟೆ ದಿನ ಮತ್ತು ೧೨ ಗಂಟೆ ರಾತ್ರಿ). ಮುಂದಿನ ದಿನಗಳಲ್ಲಿಯೂ ಈ ವೃದ್ಧಿ-ಹ್ರಾಸಗಳು ಮುಂದುವರಿಯುತ್ತಾ, ದಕ್ಷಿಣಾಯನಾರಂಭದಿನ (ಜೂನ್ ೨೧) ದಂದು ಹಗಲು ಅತ್ಯಂತ ಹಿರಿದಾಗಿದ್ದು, ಇರುಳು ಅತ್ಯಂತ ಕಿರಿದಾಗಿರುತ್ತದೆ. ಅಲ್ಲಿಂದಾರಂಭಿಸಿ, ಹಗಲು ಕಡಮೆಯಾಗುತ್ತಲೂ ಇರುಳು ಹೆಚ್ಚಾಗುತ್ತಲೂ ಬಂದು ಮೂರು ತಿಂಗಳ ನಂತರ, ಮತ್ತೊಂದು ವಿಷುವದ್ದಿನ (ಸೆಪ್ಟೆಂಬರ್ ೨೧) ದಂದು ಮತ್ತೊಮ್ಮೆ ದಿನರಾತ್ರಿಗಳು ಸಮಪ್ರಮಾಣದಿಂದಿರುತ್ತವೆ. ನಂತರದ ಮೂರು ತಿಂಗಳುಗಳಲ್ಲಿ ಮತ್ತೆ ಕ್ರಮೇಣ ಇರುಳು ಹೆಚ್ಚಾಗುತ್ತಲೂ ಹಗಲು ಕಡಮೆಯಾಗುತ್ತಲೂ ಬಂದು ಉತ್ತರಾಯಣಾರಂಭದಂದು ಹಿಂದೆ ಹೇಳಿದಂತೆ ದಿನರಾತ್ರಿಗಳು ಕ್ರಮವಾಗಿ ಪರಮಾಲ್ಪತೆಯನ್ನೂ ಪರಮಾಧಿಕ್ಯವನ್ನೂ ಹೊಂದಿರುತ್ತವೆ. ಆದರೆ ಸಮಭಾಜಕವೃತ್ತದಲ್ಲಿ ಈ ಯಾವುದೇ ಬದಲಾವಣೆಯಿಲ್ಲದೆ, ಹಗಲುರಾತ್ರಿಗಳು ಯಾವಾಗಲೂ ಸಮಪ್ರಮಾಣದಿಂದಿರುತ್ತವೆ. ಇಷ್ಟು ಮಾತ್ರವಲ್ಲ, ೬೬ ಡಿಗ್ರಿಗಳಿಗಿಂತ ಹೆಚ್ಚಿನ ಅಕ್ಷಾಂಶ ಹೊಂದಿರುವ ಸ್ಥಳಗಳಲ್ಲಿ ಇನ್ನೂ ಕೆಲವು ವಿಶೇಷತೆಗಳಿವೆ. ಉದಾಹರಣೆಗೆ ೬೯-೨೦ ಉತ್ತರ ಅಕ್ಷಾಂಶವಿರುವ ಪ್ರದೇಶದಲ್ಲಿ, ಸೂರ್ಯನು ಧನು ಮತ್ತು ಮಕರ ರಾಶಿಗಳಲ್ಲಿರುವ ಎರಡು ತಿಂಗಳುಗಳು ಸಂಪೂರ್ಣ ರಾತ್ರಿ. ಅಂತೆಯೇ ಅಲ್ಲಿ ಮಿಥುನಕರ್ಕಾಟಕಮಾಸಗಳು ಸಂಪೂರ್ಣ ಹಗಲು. ಇಂತಹ ಇನ್ನೂ ಹಲವು ವಿಶೇಷಗಳೂ, ಆ ಸ್ಥಳಗಳ ದಿನರಾತ್ರಿಪ್ರಮಾಣಗಳನ್ನು ಸಾಧಿಸುವ ಗಣಿತವಿಧಾನಗಳೂ, ಸೂರ್ಯಸಿದ್ಧಾಂತ ಸಿದ್ಧಾಂತಶಿರೋಮಣಿ ಮೊದಲಾದ ಜ್ಯೋತಿಷಗ್ರಂಥಗಳಲ್ಲಿ ನಿರೂಪಿತವಾಗಿವೆ.   

ಮತ್ಸ್ಯಪುರಾಣದಲ್ಲಿ ಹೇಳಿದ ಸಂಕ್ರಾಂತಿವ್ರತದ ವಿಧಿ ಇಂತಿದೆ - ಸಂಕ್ರಾಂತಿಯ ಹಿಂದಿನ ರಾತ್ರಿ ಉಪವಾಸದಿಂದಿದ್ದು, ಸಂಕ್ರಾಂತಿಯ ಮುಂಜಾನೆಗೆ ಎಳ್ಳುಬೆರೆಸಿದ ನೀರಿನಿಂದ ಮಿಂದು, ನಿತ್ಯಕರ್ಮಗಳನ್ನಾಚರಿಸಬೇಕು. ಅನಂತರ ಭೋಜನಸಾಮಗ್ರಿಗಳಿಂದ ಕೂಡಿದ ಮೂರು ಪಾತ್ರೆಗಳು ಮತ್ತೊಂದು ಹಸುವನ್ನು ಒಬ್ಬ ಸತ್ಪಾತ್ರನಿಗೆ ದಾನಗೈಯಬೇಕು. ಸಾಮರ್ಥ್ಯವಿಲ್ಲದವನು ಒಂದು ಹಣ್ಣನ್ನು ದಾನವಾಗಿ ನೀಡಿದರೂ ಸರಿಯೇ. ದಾನದ ಸಂದರ್ಭದಲ್ಲಿ ಪಠಿಸುವ ಶ್ಲೋಕಗಳಲ್ಲಿ ಉದ್ದಿಷ್ಟವಾದ ದೇವತೆಗಳು ಕ್ರಮವಾಗಿ ಯಮ, ರುದ್ರ ಮತ್ತು ಧರ್ಮ. ಕೊನೆಯಲ್ಲಿ ಬರುವ ಶ್ಲೋಕವಿದು - ಯಥಾ ಭೇದಂ ನ ಪಶ್ಯಾಮಿ ಶಿವವಿಷ್ಣ್ವಬ್ಜಯೋನಿಷು | ತಥಾ ಮಮಾಸ್ತು ವಿಶ್ವಾತ್ಮಾ ಶಂಕರಃ ಶಂಕರಃ ಸದಾ || ‘ನಾನು ಬ್ರಹ್ಮವಿಷ್ಣುಮಹೇಶ್ವರರಲ್ಲಿ ಭೇದವನ್ನು ಕಾಣೆನು. ಅಂತೆಯೇ ವಿಶ್ವಾತ್ಮನಾದ ಆ ಶಂಕರನು ನನಗೆ ಒಳಿತನ್ನು ಮಾಡಲಿ.’ ಯಾವುದೇ ಭೇದಭಾವವಿಲ್ಲದೆ ಎಲ್ಲಾ ದೇವತೆಗಳನ್ನು ಸಮನಾಗಿ ಕಾಣುವ ಮತ್ತು ಪೂಜಿಸುವ ಸರ್ವಶಾಸ್ತ್ರಸಾರರೂಪವಾದ ನಮ್ಮ ಸಂಸ್ಕೃತಿಯನ್ನೂ ಈ ಶ್ಲೋಕದಲ್ಲಿ ಕಾಣಬಹುದು.   

ಭೀಷ್ಮನು ದೇಹತ್ಯಾಗ ಮಾಡಲು ಉತ್ತರಾಯಣಕ್ಕಾಗಿ ಕಾದ ಕಥೆ ಎಲ್ಲರಿಗೂ ತಿಳಿದದ್ದೇ. ಈ ಕಾಲದ ವಿಶೇಷತೆಯನ್ನು ಹೇಳುವ ಇನ್ನೂ ಕೆಲವು ಪ್ರಸಂಗಗಳು ಮಹಾಭಾರತದಲ್ಲಿ ಬರುತ್ತವೆ. ಬ್ರಹ್ಮಹತ್ಯಾದೋಷವನ್ನು ಕಳೆದುಕೊಂಡ ಇಂದ್ರನು ತನ್ನ ಇಂದ್ರಪದವಿಯನ್ನು ಪಡೆಯಲು ಮರಳಿದಾಗ ಆಗಲೇ ಆ ಸ್ಥಾನದಲ್ಲಿದ್ದ ನಹುಷನಿಗೆ ಹೆದರಿ ಯೋಗ್ಯಕಾಲವನ್ನು ಪ್ರತೀಕ್ಷಿಸುತ್ತಾ ಯಾರಿಗೂ ಕಾಣದಂತೆ ಅದೃಶ್ಯರೂಪನಾಗಿ ಕೆಲಗಾಲ ಸಂಚರಿಸುತ್ತಿರುತ್ತಾನೆ. ಪತಿಯನ್ನು ಕಾಣದೆ ಶಚೀದೇವಿ ಅಳಲ ಕಡಲಲ್ಲಿ ಮುಳುಗಿ ಕೊನೆಯಲ್ಲಿ ಆಗ ತಾನೇ ಆರಬ್ಧವಾದ ಉತ್ತರಾಯಣರಾತ್ರಿಯನ್ನು ಪ್ರಾರ್ಥಿಸುತ್ತಾಳೆ - “ಪುಣ್ಯಾಂ ಚೇಮಾಮಹಂ ದಿವ್ಯಾಂ ಪ್ರವೃತ್ತಾಮುತ್ತರಾಯಣೇ | ದೇವೀಂ ರಾತ್ರಿಂ ನಮಸ್ಯಾಮಿ ಸಿದ್ಧ್ಯತಾಂ ಮೇ ಮನೋರಥಃ ||” ಆಗ ಉಪಶ್ರುತಿಯು (ರಾತ್ರ್ಯಭಿಮಾನಿ ದೇವತೆ) ಪ್ರತ್ಯಕ್ಷಳಾಗಿ, ಆಕೆಯ ಅಳಲನ್ನು ತಿಳಿದು, ಮುಂದೆ ಹೇಗೋ ಇಂದ್ರನೊಂದಿಗೆ ಭೇಟಿ ಮಾಡಿಸಿ, ಶಚಿಯ ಶೋಕವನ್ನು ನೀಗುತ್ತಾಳೆ. ಇಲ್ಲಿನ ಶಚಿಯು ಉತ್ತರಾಯಣರಾತ್ರಿಯನ್ನು ‘ಪುಣ್ಯಾಂ’ ‘ದಿವ್ಯಾಂ’ ಎಂದು ಸ್ತುತಿಸಿರುವುದು ಈ ಕಾಲದ ವೈಶಿಷ್ಟ್ಯವನ್ನು ತಿಳಿಹೇಳುತ್ತಿದೆ. ಮುಂದೆ, ಅನುಶಾಸನಪರ್ವದಲ್ಲಿಯೂ ‘ಉತ್ತರಾಯಣಮೇತಸ್ಮಿನ್ ದೀಪದಾನಂ ಪ್ರಶಸ್ಯತೇ’ ಎಂದು ಉತ್ತರಾಯಣದಲ್ಲಿ ದೀಪದಾನದ ಹಿರಿಮೆ ಹೇಳಲಾಗಿದೆ.

ಮಕರಸಂಕ್ರಾಂತಿ ಎಳ್ಳು-ಬೆಲ್ಲಗಳನ್ನು ಮೆಲ್ಲುವ ಮತ್ತು ಹಂಚುವ ದಿನವಾದ್ದರಿಂದ ಎಳ್ಳಿನ ಮಹಾತ್ಮೆಯನ್ನು ಎಳ್ಳಷ್ಟಾದರೂ ಹೇಳದಿದ್ದರೆ ಹೇಗೆ? ಪುರಾಣಗಳಲ್ಲೊಂದೆಡೆ “ತಿಲೋದ್ವರ್ತೀ ತಿಲಸ್ನಾಯೀ ಶುಚಿರ್ನಿತ್ಯಂ ತಿಲೋದಕೀ | ಹೋತಾ ದಾತಾ ಚ ಭೋಕ್ತಾ ಚ ಷಟ್ತಿಲೀ ನಾವಸೀದತಿ ||” - “ಎಳ್ಳಿನಿಂದ ಶರೀರದ ಉದ್ವರ್ತನ, ಎಳ್ಳುಬೆರೆಸಿದ ನೀರಿನ ಸ್ನಾನ, ಎಳ್ಳುನೀರಿನಿಂದ ಪಿತೃತರ್ಪಣ, ಎಳ್ಳನ್ನು ಹೋಮದಲ್ಲಿ ದ್ರವ್ಯವಾಗಿ ಅರ್ಪಿಸುವುದು, ಎಳ್ಳಿನ ದಾನ, ಎಳ್ಳನ್ನು ತಿನ್ನುವುದು - ಹೀಗೆ ಆರುಬಗೆಯಲ್ಲಿ ಎಳ್ಳನ್ನು ಉಪಯೋಗಿಸುವವನು ಎಂದಿಗೂ ನಾಶ ಹೊಂದುವುದಿಲ್ಲ” ಎಂದು ತಿಲದ ಬಲ ಸೊಗಸಾಗಿ ವರ್ಣಿತವಾಗಿದೆ. ಚಳಿಗಾಲದಲ್ಲಿ ಎಳ್ಳಿನ ಸೇವನೆಯ ಲಾಭ ಜನಸಾಮಾನ್ಯರಿಗೂ ತಿಳಿದಿರುವುದೇ. ಭಾವಪ್ರಕಾಶಗ್ರಂಥದಲ್ಲಿ ಎಳ್ಳು ಕೂದಲಿಗೆ ಹಿತ,, ಅಲ್ಪಮೂತ್ರಕಾರಿ, ಪಿತ್ತಕಫಕಾರಿ, ವಾತವಿನಾಶಕ - ಎಂದೆಲ್ಲಾ ಇದರ ಗುಣಗಳ್ಳು ಉಲ್ಲಿಖಿತವಾಗಿವೆ. “ಕೃಷ್ಣಃ ಶ್ರೇಷ್ಠತಮಸ್ತೇಷು ಶುಕ್ರಲೋ ಮಧ್ಯಮಃ ಸಿತಃ | ಅನ್ಯೇ ಹೀನತರಾಃ ಪ್ರೋಕ್ತಾಸ್ತಜ್ಜ್ಞೈ ರಕ್ತಾದಯಸ್ತಿಲಾಃ ||” - “ಕರಿಎಳ್ಳು ಉತ್ತಮ, ಬಿಳಿ ಮಧ್ಯಮ, ಉಳಿದದ್ದೆಲ್ಲ ಅಧಮ” - ಎಂದೂ ಅಲ್ಲಿಯೇ ಹೇಳಿದೆ. ಈ ಎಲ್ಲಾ ಕಾರಣಗಳಿಂದಾಗಿಯೋ ಏನೋ, ಮಕರಸಂಕ್ರಾಂತಿಯಂದು ಎಳ್ಳುಂಡೆಯೇ ಮೊದಲಾದ ತಿಲದ್ರವ್ಯಗಳನ್ನು ಹಂಚುವ ಪರಿಪಾಟಿ ಭಾರತದಲ್ಲೆಲ್ಲೆಡೆ ಇದೆ. ಅಷ್ಟೇ ಏಕೆ? ಸಂತಾನಸೌಭಾಗ್ಯಕ್ಕಾಗಿ ವಧೂವರರಿಗೆ ಎಳ್ಳಿನಿಂದ ತಯಾರಿಸಿದ ಖಾದ್ಯವನ್ನು ಕೊಡುವ ಸಂಪ್ರದಾಯ ಪ್ರಾಚೀನಗ್ರೀಕರಲ್ಲಿಯೂ ಇದ್ದಿತ್ತಂತೆ.

“ಹಿಂದೊಮ್ಮೆ ಮಕರಸಂಕ್ರಾಂತಿಯಂದು ಶಿವನು ಗೋಪೂಜೆಯನ್ನು ಮಾಡಿ, ಅದರ ಫಲರೂಪವಾಗಿ ಎಲ್ಲಾ ಜೀವಿಗಳ ಸಂತೋಷಕ್ಕಾಗಿ ಎಳ್ಳನ್ನು ಸೃಷ್ಟಿಸಿದನು. ಆದ್ದರಿಂದ ಆ ಪುಣ್ಯದಿನದಂದು ತಿಲಸ್ನಾನ, ತಿಲದಾನ - ಇವೇ ಮೊದಲಾದ ಆರು ವಿಧಗಳಿಂದ ಎಳ್ಳನ್ನು ಉಪಯೋಗಿಸಬೇಕು. ಶಿವನಿಗೆ ಎಳ್ಳೆಣ್ಣೆಯಿಂದ ಕೂಡಿದ ದೀಪವನ್ನೂ ಸಮರ್ಪಿಸಬೇಕು. ಹೀಗೆ ಮಾಡಿದವನು ಮರಣೋತ್ತರ ಸ್ವರ್ಗಲೋಕವನ್ನು ಪಡೆಯುತ್ತಾನೆ” - ಎಂದು ಶಿವರಹಸ್ಯ ಹೇಳುತ್ತದೆ. ಸ್ಕಾಂದಪುರಾಣದಲ್ಲಿಯೂ “ಯಾರು ಉತ್ತರಾಯಣದಲ್ಲಿ ಎಳ್ಳಿನಿಂದ ಮಾಡಿದ ಹಸುವನ್ನು ದಾನವಾಗಿ ನೀಡುತ್ತಾನೋ ಅವನಿಗೆ ಇಷ್ಟಾರ್ಥಗಳು ಲಭ್ಯವಾಗುತ್ತವೆ” ಎಂದು ಹೇಳಿದೆ. “ಉತ್ತರಾಯಣದಲ್ಲಿ ವಸ್ತ್ರದಾನ ತಿಲದಾನ ಇತ್ಯಾದಿಗಳನ್ನು ಮಾಡಿದವನು ರೋಗಗಳಿಂದ ಮುಕ್ತನಾಗುತ್ತಾನೆ” ಎಂದು ವಿಷ್ಣುಧರ್ಮೋತ್ತರಪುರಾಣವು ತಿಳಿಸುತ್ತದೆ. ಹೀಗೆ ಎಲ್ಲಾ ಗ್ರಂಥಗಳೂ ಮಕರಸಂಕ್ರಾಂತಿಯಂದು ಎಳ್ಳಿಗೆ ವಿಶೇಷಪ್ರಾಶಸ್ತ್ಯವನ್ನಿತ್ತಿರುವುದು ಮನನೀಯ.

ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳು. ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡೋಣ :-)