Thursday 26 January 2017

ನಕಾರದ ಆರು ಬಗೆಗಳು

ಯಾವುದೇ ವಿಷಯದ ಬಗ್ಗೆ ಮನುಷ್ಯರ ಅನಾಸಕ್ತಿಯಾಗಲಿ ಅಸಮ್ಮತಿಯಾಗಲಿ ವ್ಯಕ್ತವಾಗುವ ಬಗೆಗಳನ್ನು ಈ ಸುಭಾಷಿತವು ಸುಂದರವಾಗಿ ವಿವರಿಸುತ್ತದೆ -

ಮೌನಂ ಕಾಲವಿಲಂಬಶ್ಚ ಪ್ರಯಾಣಂ ಭೂಮಿದರ್ಶನಮ್ ।
ಭ್ರುಕುಟಿಶ್ಚಾನ್ಯವಾರ್ತಾ ಚ ನಕಾರಃ ಷಡ್ವಿಧಃ ಸ್ಮೃತಃ ॥
(ಭ್ರುಕುಟ್ಯನ್ಯಮುಖೀ ವಾರ್ತಾ) ಎಂಬ ಪಾಠಾಂತರವೂ ಇದೆ.

1. ಮೌನಮ್ - ಸುಮ್ಮನಿರುವುದು. ಮೌನಂ ಸಮ್ಮತಿಲಕ್ಷಣಮ್ ಎಂಬ ನುಡಿ ಪ್ರಸಿದ್ಧವೇನೋ ಹೌದು. ಆದರೆ ಹಲವೆಡೆ ಅದು ಅಸಮ್ಮತಿಯನ್ನು ಸೂಚಿಸುವ ಹಾದಿಯೂ ಹೌದು.
2. ಕಾಲವಿಲಂಬಃ - ಪ್ರತಿಕ್ರಿಯಿಸುವುದಕ್ಕೆ ಅಥವಾ ಸೂಚಿಸಲ್ಪಟ್ಟ ಕೆಲಸ ಮಾಡುವದಕ್ಕೆ ತಡಗೈಯುವುದು. ಇದೂ ಅಸಮ್ಮತಿಯ ಸೂಚಕ.
3. ಪ್ರಯಾಣಮ್ - ಆ ಸ್ಥಳದಿಂದ ಬೇರೆಡೆಗೆ ಸರಿಯುವುದು.
4. ಭೂಮಿದರ್ಶನಮ್ - ನೆಲ ನೋಡುವುದು.
5. ಭ್ರುಕುಟಿಃ - ಹುಬ್ಬುಗಂಟಿಕ್ಕುವುದು.
6. ಅನ್ಯವಾರ್ತಾ - ವಿಷಯಾಂತರಗೈಯುವುದು ಅಥವಾ ಇನ್ನೊಬ್ಬರೊಂದಿಗೆ ಮಾತಿಗೆ ತೊಡಗುವುದು.
- ಇವೆಲ್ಲವೂ ಒಲ್ಲೆ ಎಂಬುದನ್ನು ಸೂಚಿಸುವ ನಾನಾಪ್ರಕಾರಗಳು.

ಜೀವನದಲ್ಲಿ ಪದೇ ಪದೇ ಅನುಭವಕ್ಕೆ ಬರುವ (ನಾವೂ ಹಲವು ಬಾರಿ ಅವಲಂಬಿಸುವ) ನಕಾರದ ಈ ನಡೆಗಳನ್ನು ಸೊಗಸಾಗಿ ಸಂಗ್ರಹಿಸಿದ ಸುಭಾಷಿತಕಾರನಿಗೆ ನಮೋ ನಮಃ.

Twitter ನಲ್ಲಿ ಈ ಶ್ಲೋಕವನ್ನು ಮಿತ್ರರೊಬ್ಬರು ಉಲ್ಲೇಖಿಸಿದ್ದರು. ಅದನ್ನು ವಿವರಣೆಯೊಂದಿಗೆ ಪ್ರಕಟಿಸಿದ್ದೇನೆ.

Thursday 12 January 2017

ಥಾಯ್ ಭಾಷೆಯಲ್ಲಿ ಸಂಸ್ಕೃತದ ಪ್ರಭಾವ

ಥಾಯ್ಲೆಂಡಿನಲ್ಲಿ ವ್ಯವಹಾರದಲ್ಲಿರುವ ಥಾಯ್ ಭಾಷೆ ಸಂಸ್ಕೃತದಿಂದ ಬಹಳಷ್ಟು ಪ್ರಭಾವಿತವಾಗಿದೆ. ಹಿರಿಯ ಸಂಶೋಧಕರಾದ Dr. William J. Gedney ಯವರು ’ಹೇಗೆ ಇಂಗ್ಲಿಷ್ ಭಾಷೆಯಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಶಬ್ದಗಳು ರೂಢವಾಗಿವೆಯೋ ಅಷ್ಟೇ ಸಹಜವಾಗಿ ಥಾಯ್ ಭಾಷೆಯಲ್ಲಿ ಭಾರತೀಯಭಾಷೆಗಳ ಪ್ರಭಾವವಿದೆಯೆಂದು ಹೇಳುತ್ತಾರೆ. ಥಾಯ್ ಭಾಷೆ ಸಂಸ್ಕೃತ ಮತ್ತು ಪಾಲಿಗಳ ಮಿಶ್ರಣರೂಪವಾದದ್ದೆಂಬ ಅಭಿಪ್ರಾಯವೂ ಇದೆ. ಸಂಸ್ಕೃತದ ನರಕ ಥಾಯ್ ನಲ್ಲಿ ನರೋಕ್ ಎಂದಾಗಿದೆ. ಪೋಸ್ಟ್ ಆಫೀಸಿಗೆ ಪ್ರೈಸನೀ ಎಂದು ಹೆಸರು. ಇದರ ಸಂಸ್ಕೃತಮೂಲ ’ಪ್ರೈಷಣೀ’. ಸಂಸ್ಕೃತದ ’ಧನಾಗಾರ’ ಅಲ್ಲಿ ಥನಾಖಾನ್ ಎಂದಾಗಿ Bank ಎಂಬರ್ಥದಲ್ಲಿ ಬಳಸಲ್ಪಡುತ್ತಿದೆ. ಅಲ್ಲಿನ ರಾಜರುಗಳಿಗೆ ’ರಾಮ’ ಎಂದೇ ಹೆಸರು. ಈಗಿನ ರಾಜನನ್ನು ರಾಮ 9’ ಎಂದು ವ್ಯವಹರಿಸುತ್ತಾರೆ. ಸಂಸ್ಕೃತದ ’ಪ್ರತ್ಯಕ್ಷ’ ಪಾಲಿಯಲ್ಲಿ ’ಪ್ರಚಖ್ಖ’ ಎಂದಿದ್ದು ಥಾಯ್ ನಲ್ಲಿ ಇವೆರಡರ ಮಿಶ್ರಣದಿಂದ ’ಪ್ರಚಕ್ಷ’ವಾಗಿದೆ. ಹೀಗೆಯೇ ಪ್ರಸಿದ್ಧ – ಪ್ರಸಿತ್, ಪ್ರೀತಿ – ಪ್ರಿದಿ, ವಿಶುದ್ಧ – ವಿಸುಧ್, ಪ್ರಬೋಧ – ಪ್ರಫೋದ್ ಇತ್ಯಾದಿ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಹೀಗೆ ಅಲ್ಪಸ್ವಲ್ಪ ಉಚ್ಚಾರಣಾಭೇದವಿದ್ದರೂ ಅಲ್ಲಿನ ಶಬ್ದಗಳ ಸಂಸ್ಕೃತಮೂಲವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಇನ್ನು ಕೆಲವು ಶಬ್ದಗಳು ಅಲ್ಲಿ ಹೋದಾಗ ಅರ್ಥಾಂತರ ಪಡೆದುಕೊಂಡಿರುವುದೂ ಇದೆ. ಪ್ರಾರ್ಥನಾಶಬ್ದ ಥಾಯ್ ನಲ್ಲಿ ಇಚ್ಛಾರ್ಥಕವಾಗಿ ಬಳಕೆಯಲ್ಲಿದೆ. ’ಸಣ್ಣ’ ಎಂದು ರೂಪಾಂತರಗೊಂಡಿರುವ ಸಂಸ್ಕೃತದ ’ಸಂಜ್ಞಾ’ಶಬ್ದ ಮೂಲದ ’ಸಚೇತನತ್ವ’ ಎಂಬರ್ಥವನ್ನು ಬಿಟ್ಟು Promise ಎಂಬರ್ಥವನ್ನು ಪಡೆದಿದೆ.
ಅಲ್ಲಿನ ಪ್ರದೇಶಗಳ ಹೆಸರುಗಳಲ್ಲಿಯೂ ಸಂಸ್ಕೃತದ ಪ್ರಭಾವವನ್ನು ಕಾಣಬಹುದು. ಉದಾಹರಣೆಗೆ –
                   ಸಂಸ್ಕೃತ                                       ಥಾಯ್
                   ಅಯೋಧ್ಯಾ                                    ಅಯುತ್ಥಯಾ
                   ಚಂದ್ರಪುರೀ                                    ಚಂಥಬುರೀ
                   ಜಯಭೂಮಿ                                    ಚಯಫೂಮ್
                   ಕಾಲಸಿಂಧು                                    ಕಾಲಸಿಂಧು
                   ರಾಜಪುರೀ                                     ರಾಜ್ಬುರೀ                  
ಆ ದೇಶದ ಸಂಸ್ಕೃತಿಯೂ ಭಾರತೀಯತೆಯಿಂದ ಬಹಳಷ್ಟು ಪ್ರಭಾವಿತವಾಗಿದೆ. ಕೆಲವೊಂದು ನೃತ್ಯಗಳ ಸಂದರ್ಭದಲ್ಲಿ ಯುವಕರು ವೇಷ್ಟಿ ಧರಿಸುತ್ತಾರೆ. ರಾಜಧಾನಿಯಾದ ಬ್ಯಾಂಕಾಕ್ ನಲ್ಲಿ ಹಿಂದೂದೇವತೆಗಳ ಆರು ದೇವಾಲಯಗಳಿವೆ. ಗಣಪತಿ, ವಿಷ್ಣು, ಲಕ್ಷ್ಮಿ, ಬ್ರಹ್ಮ, ಇಂದ್ರ ಮತ್ತು ತ್ರಿಮೂರ್ತಿಗಳು ಅಲ್ಲಿ ಪೂಜಿಸಲ್ಪಡುವ ದೇವತೆಗಳು.

ಹೀಗೆ ದೂರದ ದೇಶದಲ್ಲಿಯೂ ನಮ್ಮ ಸಂಸ್ಕೃತ-ಸಂಸ್ಕೃತಿಗಳು ಸರ್ವತೋಮುಖವಾಗಿ ಸೊಗಯಿಸುತ್ತಿರುವುದು ನಮಗೆ ಸಂತೋಷಕರವೇ ತಾನೇ ?

ಸ್ವೀಡನ್ನಿನ ಶಿಲಾಲೇಖದಲ್ಲಿ ಮಹಾಭಾರತಶ್ಲೋಕ

೧೯೨೦ರಲ್ಲಿ ಸ್ವೀಡನ್ನಿನ ಜೆಟೈರ್ಸ್ಟೀನ್ ಎಂಬವರು ಹಾವಸೆಗಳಿಂದ ಮುಚ್ಚಲ್ಪಟ್ಟಿದ್ದ ಶಿಲಾಲೇಖವೊಂದನ್ನು ಕಂಡರು. ಅವರಿಗೆ ದೇವನಾಗರೀ ಲಿಪಿಯ ಮತ್ತು ಸಂಸ್ಕೃತಭಾಷೆಯ ಪರಿಚಯವಿದ್ದಿದ್ದರಿಂದ ಇದು ಸಂಸ್ಕೃತದ ಶ್ಲೋಕವೆಂದು ಗುರುತಿಸಿದರು. ಆ ಶ್ಲೋಕ ಹೀಗಿತ್ತು –
                    ಯಾವಚ್ಚ ಮೇ ಧರಿಷ್ಯಂತಿ ಪ್ರಾಣಾ ದೇಹೇ ಶುಚಿಸ್ಮಿತೇ |
                                ತಾವತ್ ತ್ವಯಿ ಭವಿಷ್ಯಾಮಿ ಸತ್ಯಮೇತದ್ ಬ್ರವೀಮಿ ತೇ ||
          (ನಿರ್ಮಲಮಂದಹಾಸದವಳೇ ! ಎಲ್ಲಿಯವರೆಗೆ ನನ್ನ ಶರೀರದಲ್ಲಿ ಪ್ರಾಣಗಳಿರುವುದೋ ಅಲ್ಲಿಯವರೆಗೂ ನಿನ್ನಲ್ಲಿ ಪ್ರೀತಿಯುಳ್ಳವನಾಗಿರುತ್ತೇನೆ. ಇದು ಸತ್ಯ !)
          ಸ್ವಾರಸ್ಯವೆಂದರೆ ಇದು ಮಹಾಭಾರತದ ನಲೋಪಾಖ್ಯಾನದಲ್ಲಿ ಬರುವ ಶ್ಲೋಕ. ಈ ಪ್ರೇಮಸಂದೇಶದ ಹಿನ್ನೆಲೆಯನ್ನರಸಿದವರಿಗೆ ಸಿಕ್ಕಿದ ಮಾಹಿತಿ ಆಶ್ಚರ್ಯಕರವಾಗಿತ್ತು. ಇದನ್ನು ಕೆತ್ತಿಸಿದವನ ಹೆಸರು ಫೆಡರಿಕ್-ಟುಲ್-ಬರ್ಗ್ (೧೮೦೨-೧೮೫೩). ಸಂಸ್ಕೃತಪ್ರೇಮಿಯಾಗಿದ್ದ ಇವರು ಉಪ್ಸಲ್ ವಿಶ್ವವಿದ್ಯಾಲಯದ ಪ್ರಾಚ್ಯಭಾಷಾವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಸಂಸ್ಕೃತ, ಹಿಬ್ರೂ, ಸಿರಿಯಾ ಇತ್ಯಾದಿ ಪ್ರಾಚೀನಭಾಷೆಗಳಲ್ಲಿ ಅಸದಳ ಒಲವು ಇವರಿಗಿತ್ತು. ಇವರು ತಮ್ಮ ತಾರುಣ್ಯದಲ್ಲಿ ಸೋಫಿಯಾ ಎಂಬವಳನ್ನು ಪ್ರೀತಿಸಿದ್ದರು. ಆಕೆಯ ನೆನಪಿಗಾಗಿ ಕೆತ್ತಿಸಿದ್ದ ಶಿಲಾಲೇಖವಿದು. ಮುಂದೆ ಜೆಟೈರ್ಸ್ಟೀನರವರೆಗೂ ಸುಮಾರು ೯೦ ವರ್ಷಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ. ಈಗ ಈ ಶಿಲೆಯುರುವ ಬೆಟ್ಟ ’ಮೌಂಟ್ ಎಂಗೇಜ್ಮೆಂಟ್’ ಎಂದು ಪ್ರಸಿದ್ದವಾಗಿ ಪ್ರವಾಸಿಕೇಂದ್ರವಾಗಿ ಜನರನ್ನು ಸೆಳೆಯುತ್ತಿದೆ.

          ಸ್ವಾಮಿ ವಿವಾಕಾನಂದರಿಗಿಂತ ಪೂರ್ವದಲ್ಲಿ, ಮ್ಯಾಕ್ಸ್ ಮುಲ್ಲರ್ ಹುಟ್ಟುವ ಮುನ್ನ ವಿದೇಶಗಳಲ್ಲಿ ಸಂಸ್ಕೃತದ ಪರಿಚಯವಿದ್ದಂತಿಲ್ಲ. ಈ ಹಿನ್ನೆಲೆಯಲ್ಲಿ, ಅಷ್ಟು ಹಿಂದೆಯೇ ಸಂಸ್ಕೃತದಲ್ಲಿ ಪ್ರಕೃತ ಶಿಲಾಲೇಖ ಕೆತ್ತಿಸಲ್ಪಟ್ಟಿರುವುದು ಸಾಮಾನ್ಯವಿಷಯವಲ್ಲ.

ಸಂಸ್ಕೃತದ ಸಾರ್ವತ್ರಿಕತೆ ಮತ್ತು ಸರ್ವಜನೀನತೆ

ಒಂದು ಕಾಲೇಜಿನಲ್ಲಿ ಇತ್ತೀಚೆಗೆ ಅವಸಾನದಂಚಿನಲ್ಲಿರುವ ಭಾಷೆಗಳ ಬಗೆಗೆ ಸೆಮಿನಾರ್ ನಡೆಯುವುದಿತ್ತು. ಅದಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ನನ್ನನ್ನಾಹ್ವಾನಿಸುತ್ತಾ “ನೀವು ‘ಸಂಸ್ಕೃತ ಸ್ಕಾಲರ್ ಗಳು ಅವಶ್ಯ ಬರಬೇಕು. ಈಗ ಹೆಚ್ಚಿನ ಸಮಸ್ಯೆಯಿರುವುದು ಸಂಸ್ಕೃತಕ್ಕೇ” ಎಂದುಬಿಟ್ಟರು. ’ಒಂದಷ್ಟು’ ಉತ್ತರಿಸಿಯೇ ಮರಳಿದೆನೆಂಬುದು ಬೇರೆ ಮಾತು! ಆದರೆ ಪ್ರಾಜ್ಞರೆನಿಸಿರುವ ವ್ಯಕ್ತಿಗಳಲ್ಲೂ ಈ ಅಜ್ಞತೆಯನ್ನೋ ಭ್ರಮೆಯನ್ನೋ ಕಂಡು ಅಚ್ಚರಿಗೊಂಡದ್ದಂತೂ ಹೌದು. ನಮ್ಮ ದೇಶಕ್ಕೇ ಪ್ರತಿಷ್ಠಾಪಾರಮ್ಯವನ್ನಿತ್ತಿರುವ ಸಂಸ್ಕೃತಕ್ಕೆ ಸಲ್ಲಬೇಕಾದ ಪೂರ್ಣಪ್ರಮಾಣದ ಪ್ರೀತ್ಯಾದರಗಳು ಕಾಣಿಸುತ್ತಿಲ್ಲವೆಂಬುದು ದಿಟವೇ ಆದರೂ, “ಅವಸಾನ”ದಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಸೇರಿಸಬೇಕಾದ ದುಃಸ್ಥಿತಿ ಖಂಡಿತವಾಗಿಯೂ ಇಲ್ಲ. ಕಾರಣ, ಈ ಭಾಷೆಯು ಎಲ್ಲ ಎಲ್ಲೆಗಳನ್ನೂ ಮೀರಿ ವಿಶ್ವವ್ಯಾಪಿಯಾಗಿ ಪಸರಿಸುತ್ತಿರುವುದು.
ಈ ಬರೆಹಕ್ಕೆ ತೊಡಗಿದಾಗ, ಕೆಲವು ಓದುಗರಿಗೆ ಇದು “ಚರ್ವಿತಚರ್ವಣ”ವೆಂದೆನಿಸೀತೋ ಎಂಬ ಆತಂಕವೂ ಕಾಡಿದ್ದಿದೆ. ಈ ಕಾಲದಲ್ಲಿ ಸಂಸ್ಕೃತವು ಹೇಗೆ ಮೇದಿನಿಯೆಲ್ಲೆಡೆ ಮಾನ್ಯವಾಗಿದೆಯೆಂಬುದು ಅಂತರ್ಜಾಲದಲ್ಲಿ, ವಾರ್ತಾಮಾಧ್ಯಮಗಳಲ್ಲಿ ಆಯಾ ಸಂದರ್ಭಗಳಲ್ಲಿ ಬಿತ್ತರವಾಗುತ್ತಲೇ ಇದೆ. ಆದರೂ, ಈ ವಾರ್ತೆಗಳು ಬಹುಜನರ ಅರಿವಿಗೆ ಬಂದಿಲ್ಲವೆಂಬುದೂ ಮೇಲಿನ ದೃಷ್ಟಾಂತದಿಂದ ಸುವೇದ್ಯ. ಪ್ರಾಜ್ಞರ ವಿಷಯದಲ್ಲೇ ಹೀಗಾದಲ್ಲಿ ಜನಸಾಮಾನ್ಯ ಸ್ಥಿತಿಯೇನು ? ಹಾಗಾಗಿ ಸಂಸ್ಕೃತಪ್ರೇಮವಿಂದು ಹೇಗೆ ಸೀಮಾತೀತವಾಗಿ ವಿಶ್ವದೆಲ್ಲೆಡೆ ವ್ಯಾಪಿಸಿದೆಯೆಂಬುದನ್ನು ವಿವರಿಸುವುದು ಮತ್ತು ಸಂಸ್ಕೃತದ ಸಾಂಪ್ರತಿಕ ಸ್ಥಿತಿಗತಿಗಳ, ಒಂದಷ್ಟು ಸ್ವಾರಸ್ಯಕರ ಅಂಶಗಳ ಕುರಿತು ಬೆಳಕು ಚೆಲ್ಲುವುದು ಪ್ರಕೃತ ಲೇಖನದ ಉದ್ದೇಶ.
’ವಿಶ್ವವ್ಯಾಪಿ ಸಂಸ್ಕೃತ’ವೆಂಬ ವಿಷಯದಲ್ಲಿ ಮೊತ್ತಮೊದಲು ಉಲ್ಲೇಖಿಸಲಿಷ್ಟವಾಗುವ ವಿದ್ಯಾಲಯ ಲಂಡನ್ ನಲ್ಲಿರುವ “ಸೇಂಟ್ ಜೇಮ್ಸ್ ಇಂಡಿಪೆಂಡೆಂಟ್ ಸ್ಕೂಲ್”. ಏಕೆಂದರೆ ಇಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಸಂಸ್ಕೃತ ಕಡ್ಡಾಯ! ಕಳೆದ ೩೫ ವರ್ಷಗಳಿಂದ ಸಂಸ್ಕೃತಾಧ್ಯಾಪನ ನಡೆಸಿಕೊಂಡು ಬರುತ್ತಿರುವ ಪ್ರಕೃತವಿದ್ಯಾಲಯಕ್ಕೆ ಈಗ ಈ ಕಾರಣದಿಂದಲೇ ವಿಶಿಷ್ಟ ಪ್ರತಿಷ್ಠೆಯೂ ಇದೆ. ಅಮೇರಿಕಾ, ನ್ಯೂಜಿಲ್ಯಾಂಡ್ ಇತ್ಯಾದಿ ಏಳು ದೇಶಗಳಲ್ಲಿ ಈ ಶಾಲೆಯ ಶಾಖೆಗಳಿದ್ದು, ಎಲ್ಲಾ ಕಡೆಗಳಲ್ಲಿಯೂ ಸಂಸ್ಕೃತದ ಕಲಿಕೆ ಅನಿವಾರ್ಯವೆಂಬ ಅಂಶವೂ ನಮ್ಮನ್ನು ಬೆರಗುಗೊಳಿಸುತ್ತದೆ. ಸಂಸ್ಕೃತದ ಕುರಿತು ಅಲ್ಲಿನ ಸಂಸ್ಕೃತವಿಭಾಗದ ಮುಖ್ಯಸ್ಥರಾದ ಡಾ. ವಾರ್ವಿಕ್ ಜೆಸ್ಸೊಪ್ ರವರ ಬಿಚ್ಚುಗೊರಳಿನ ಮೆಚ್ಚುನುಡಿಯಿಂತಿದೆ -
This is the most perfect and logical language in the world, the only one that is not named after the people who speak it.  Indeed the word itself means perfected language.
ನ್ಯೂಜಿಲ್ಯಾಂಡ್ ನ ಆಕ್ಲಂಡಿನಲ್ಲಿರುವ ’ಫಿಸಿನಾ ಸ್ಕೂಲ್’ನಲ್ಲಿಯೂ ಒಂದರಿಂದ ಎಂಟರವರೆಗೆ ಸಂಸ್ಕೃತ ಅನಿವಾರ್ಯ. ವಿದ್ಯಾರ್ಥಿಗಳ ಮಾನಸಿಕ ವಿಕಾಸ, ಬೌದ್ಧಿಕ ಪ್ರಗತಿ, ಶಾರೀರಿಕ ದಾರ್ಢ್ಯ – ಈ ಮೂರು ಅಂಶಗಳನ್ನು ಲಕ್ಷ್ಯದಲ್ಲಿರಿಸಿ ೧೯೯೭ರಲ್ಲಿ ಆರಂಭಿಸಲ್ಪಟ್ಟ ಈ ಶಾಲೆ ತನ್ನ ಲಕ್ಷ್ಯದ ಪರಿಪೂರ್ತಿಗಾಗಿ ಸಂಸ್ಕೃತವನ್ನೂ ಪಾಠ್ಯಕ್ರಮದಲ್ಲಿ ಅಳವಡಿಸಿಕೊಂಡಿತು. “ಸಂಸ್ಕೃತದ ಧ್ವನಿ ಮತ್ತು ವ್ಯಾಕರಣ ವ್ಯವಸ್ಥೆ ವಿಶಿಷ್ಟವಾದುದು. ಅನ್ಯಭಾಷೆಗಳ ಅಧ್ಯಯನಕ್ಕೆ ಇದರಿಂದ ಬಲವಾದ ಅಡಿಪಾಯ ದೊರೆತಂತಾಗುತ್ತದೆ.” – ಇದು ಅಲ್ಲಿನ ವ್ಯವಸ್ಥಾಪಕರ ಅಭಿಪ್ರಾಯ.
ಇದಲ್ಲದೆ, ಆಸ್ಟ್ರೇಲಿಯಾದ ಎರಾಸ್ಮಸ್ ಸ್ಕೂಲ್ ಆಫ್ ಪ್ರೈಮರಿ ಎಜುಕೇಶನ್ ಎಂಬಲ್ಲಿಯೂ ಆರನೇ ತರಗತಿಯವರೆಗೆ ಸಂಸ್ಕೃತದ ಕಲಿಕೆಯಿದೆ. ವಿದ್ಯಾರ್ಥಿಗಳ ಬುದ್ಧಿವೃದ್ಧಿಗೆ ಸಂಸ್ಕೃತವು ವಿಪುಲಸ್ರೋತಸ್ಸುಗಳನ್ನೊದಗಿಸುತ್ತದೆಂದು ತನ್ನ ನಡೆಯನ್ನು ಸಮರ್ಥಿಸುತ್ತಿದೆ ಈ ಸಂಸ್ಥೆ.
ಸಾಮಾನ್ಯವಾಗಿ ನಾವು ಭಾಷೆಗಳನ್ನು ಕಲಿಯುವುದು ನಮ್ಮದ್ದೆಂಬ ಕಾರಣದಿಂದ ಅಥವಾ ವ್ಯಾವಹಾರಿಕ ಆವಶ್ಯಕತೆಗಳಿಂದ. ಆದರೆ, ಮೇಲ್ಕಾಣಿಸಿದೆಲ್ಲರಿಗೂ ಸಂಸ್ಕೃತಾಧ್ಯಯನಕ್ಕೆ ಇದರ ಉತ್ಕೃಷ್ಟಗುಣಗಳು ಮತ್ತು ಅದರಿಂದಾಗುವ ವಿಶೇಷಪ್ರಯೋಜನಗಳು ಕಾರಣವಾಗಿವೆಯೇ ಹೊರತು ಮತ್ತಾವುದೂ ಅಲ್ಲವೆಂಬುದನ್ನು ಇಲ್ಲಿ ನಾವು ಕಾಣಬೇಕಾದದ್ದು. ಇನ್ನೂ ವಿಶೇಷವೆಂದರೆ, ಆಸ್ಟ್ರೇಲಿಯಾದಲ್ಲಿ ಬಿ. ಎಸ್. ಕೆ. ಪ್ಲೇಮಿಂಗ್ಟನ್ ಎಂಬ ಸಂಸ್ಕೃತ ವಿದ್ಯಾಲಯವೂ ಆರಂಭಗೊಂಡಿದೆ. ೨೦೧೨ರ ಫೆಬ್ರವರಿಯಲ್ಲಿ ಆರಂಭಗೊಂಡ ಈ ವಿದ್ಯಾಲಯವು ಸಂಸ್ಕೃತ, ವೇದ, ವೇದಗಣಿತ, ಸಂಸ್ಕೃತವಿಜ್ಞಾನ – ಇತ್ಯಾದಿ ವಿಷಯಗಳನ್ನು ಬೋಧಿಸುತ್ತಿದೆ. ಭಾರತದ ಹೊರಗೆ ಆರಂಭಗೊಂಡ ಮೊತ್ತಮೊದಲ ಸಂಸ್ಕೃತವಿದ್ಯಾಲಯವೆಂಬ ಹಿರಿಮೆಗೂ ಇದು ಪಾತ್ರವಾಗಿದೆ.
ಸಂಸ್ಕೃತವು ಭಾರತೀಯತೆಯನ್ನು ರೂಪಿಸಿದ ಭಾಷೆ. ಆದರೆ ಆ ಭಾರತದಲ್ಲಿನ ಶಿಕ್ಷಣವ್ಯವಸ್ಥೆಯಲ್ಲಿ ಒಂದನೇ ತರಗತಿಯಿಂದಲೇ ಸಂಸ್ಕೃತಾಧ್ಯಯನ ಎಲ್ಲೂ ಇಲ್ಲ. ತದನಂತರದಲ್ಲಿಯೂ ಪಾಠ್ಯಕ್ರಮದಲ್ಲಿ ಇದಕ್ಕವಕಾಶವನ್ನೀಯದ ಶಾಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ಕೆಲವೆಡೆ ಇಡೀ ತಾಲೂಕು ಅಥವಾ ಜಿಲ್ಲೆಯಲ್ಲಿ ಸಂಸ್ಕೃತವಿರುವ ಒಂದು ಶಾಲೆಯೂ ಸಿಗಲಾರದು. ಇನ್ನು ಎಲ್ಲಾದರೂ ಸೌಭಾಗ್ಯವಶಾತ್ ಸರಕಾರ ಇದನ್ನು ವೈಕಲ್ಪಿಕ (optional) ಭಾಷೆಯಾಗಿಯಾದರೂ ಘೋಷಿಸಿದರೆ, ಅದನ್ನೂ ವಿರೋಧಿಸುವ ಪಂಡಿತಂಮನ್ಯರಿದ್ದಾರೆ. ಈ ಅಂಶಗಳನ್ನು ಮನಗಂಡಾಗ ಈಗಾಗಲೇ ಹೇಳಿದ ವಿದೇಶೀಯ ವಿದ್ಯಾಲಯಗಳ ಹಿರಿಮೆ ಸ್ಫುಟವಾದೀತು.
ಇದಿಷ್ಟು ಪ್ರಾಥಮಿಕಸ್ತರದ ಮಾತಾಯಿತು, ಇನ್ನು ಉನ್ನತಶಿಕ್ಷಣದಲ್ಲಂತೂ ೬೦ ದೇಶಗಳಲ್ಲಿನ ೪೬೦ ಸುಮಾರು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಾಧ್ಯಯನಕ್ಕೆ ಅವಕಾಶವಿದೆ. ಜರ್ಮನಿಯೊಂದರಲ್ಲೇ ೧೪ ವಿಶ್ವವಿದ್ಯಾಲಯಗಳು ಸಂಸ್ಕೃತವನ್ನು ಬೋಧಿಸುತ್ತಿವೆ. ಅಷ್ಟೇ ಅಲ್ಲದೆ, ಒಂದೊಂದು ವಿಶ್ವವಿದ್ಯಾಲಯವೂ ಸಂಸ್ಕೃತಕ್ಕೆ ಸಂಬಂಧಿಸಿದ ಹಲವಾರು ಕೋರ್ಸ್ ಗಳನ್ನು ನಡೆಸುತ್ತಿದೆ. ಉದಾಹರಣೆಗೆ, Australian National University ಯಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ೩೬ ವಿಭಿನ್ನ ಕೋರ್ಸ್ ಗಳಿವೆ. ಅಲ್ಲಿನ University of Sydney ಯಲ್ಲಿಯೂ ಇದೇ ಸಂಖ್ಯೆಯ ಕೋರ್ಸ್ ಗಳಿವೆ.
ಈ ವಿದೇಶೀಯ ವಿಶ್ವವಿದ್ಯಾಲಯಗಳಲ್ಲಿ ಹಲವೆಡೆ ಏಶ್ಯನ್ ಭಾಷೆಗಳ ಅಧ್ಯಯನ, ವಿದೇಶೀಯ ಭಾಷೆಗಳ ಅಧ್ಯಯನ – ಇತ್ಯಾದಿವಿಭಾಗಗಳ ಅಂತರ್ಗತವಾಗಿ, ಕೆಲವೆಡೆ ’ಪ್ರದರ್ಶನ’ದ ದೃಷ್ಟಿಯಿಂದ ಸಂಸ್ಕೃತಕ್ಕೂ ಅವಕಾಶವಿತ್ತಿರುವುದು ಹೌದಾದರೂ, ಅಲ್ಲೆಲ್ಲ ಹೆಚ್ಚು ಬೇಡಿಕೆಯಿರುವ ಭಾಷೆಗಳಲ್ಲಿ ಸಂಸ್ಕೃತವೂ ಅಗ್ರಪಂಕ್ತಿಯಲ್ಲಿದೆಯೆಂಬುದು ಸುಳ್ಳಲ್ಲ. ಉದಾಹರಣೆಗೆ, ಜರ್ಮನಿಯ ವಿಶ್ವವಿದ್ಯಾಲಯವೊಂದರಲ್ಲಿ ಪ್ರತಿವರ್ಷವೂ ನಡೆಯುವ ಸಮ್ಮರ್ ಸ್ಕೂಲ್ ನಲ್ಲಿ ಇಲ್ಲಿಯವರೆಗೆ ೩೪ ದೇಶಗಳಿಂದ ೨೫೪ ಮಂದಿ ಭಾಗವಹಿಸಿದ್ದಾರೆ. “ವ್ಯವಸ್ಥಾಸೌಕರ್ಯದ ದೃಷ್ಟಿಯಿಂದ ಆವೇದನೆಗೈದಿರುವ ಹಲವರನ್ನು ನಾವೇ ಬಿಡಬೇಕಾಗಿ ಬಂದಿದೆ” ಎಂದು ಇದರ ಸಂಚಾಲಕ ಡಾ. ಮಿಶೆಲ್ಸ್ ಹೇಳಿದ್ದಾರೆ.
ಇದಿಷ್ಟು ಔಪಚಾರಿಕಶಿಕ್ಷಣಕ್ಕೆ ಸಂಬಂಧಿಸಿದ್ದಾಯಿತು. ಈಗಂತೂ ಆನ್ ಲೈನ್ ತರಗತಿಗಳು, ಇನ್ನಿತರ C. D. ಮೊದಲಾದ ಮಾಧ್ಯಮಗಳಿಂದ ಕಲಿಯುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ವರ್ಧಿಸುತ್ತಿದೆ. ನನ್ನ ಮಿತ್ರರೊಬ್ಬರು ಅಂತರ್ಜಾಲಮುಖೇನ ನಡೆಸುತ್ತಿದ್ದ ’ಅಷ್ಟಾಧ್ಯಾಯೀಪರಿಚಯ’ ಪಾಠದಲ್ಲಿ ಸುಮಾರು ೨೦ರಷ್ಟು ವಿದೇಶೀಯ ವಿದ್ಯಾರ್ಥಿಗಳಿದ್ದರು. ಹೀಗೆ ಅಲ್ಲಲ್ಲಿ ಹಲವಾರು ವಿದ್ವಾಂಸರು ಕಾವ್ಯ, ವ್ಯಾಕರಣ, ಯೋಗ, ವೇದಾಂತ – ಇತ್ಯಾದಿ ವಿಷಯಗಳನ್ನು ಶಿಕ್ಷಣಸಂಸ್ಥೆಗಳ ಮೂಲಕ ಅಥವಾ ವೈಯಕ್ತಿಕವಾಗಿ ಅಂತರ್ಜಾಲದ ಮಾಧ್ಯಮದಿಂದ ಬೋಧಿಸುತ್ತಿದ್ದಾರೆ. ಈ ವಿಷಯಗಳಲ್ಲಿ ಆಗಾಗ ನಡೆಯುವ ನಿಯತಕಾಲಿಕ ಶಿಬಿರಗಳಲ್ಲಿ ಅಧ್ಯಾಪನಕ್ಕಾಗಿ ಹಲವಾರು ಭಾರತೀಯ ವಿದ್ವಾಂಸರು ವಿದೇಶಕ್ಕೆ ಹೋಗುತ್ತಿರುವುದೂ ಹೌದು.

ಇದೊಂದು ವಿಹಂಗಮದೃಷ್ಟಿಯಷ್ಟೇ. ಸಂಸ್ಕೃತವು ತನ್ನ ಗುಣೋತ್ಕರ್ಷದಿಂದಲೇ ಹೇಗೆ ಜಗತ್ತನ್ನು ತನ್ನೆಡೆಗೆ ಸೆಳೆಯುತ್ತಿದೆಯೆಂಬುದಕ್ಕೆ ಕೆಲವೊಂದು ದೃಷ್ಟಾಂತಗಳನ್ನಿತ್ತಿದ್ದೇನೆ. ಇಂತು ಸತ್ತ್ವಾತಿಶಯದಿಂದ ಕೂಡಿದ ಈ ಭಾಷೆ ಅವನಿಯಲ್ಲಿ ಅಜರಾಮರವಾಗಿಯೇ ಇರಲಿದೆ. ಸತ್ತ್ವಯುತವಾದದ್ದಕ್ಕೆ ಸಾವಿಲ್ಲ. ಅದನ್ನುಳಿಸಲು ಯಾರದ್ದೂ ಶಿಫಾರಸ್ಸು, ಔದಾರ್ಯ – ಇತ್ಯಾದಿಗಳು ಬೇಕಿಲ್ಲ. ನಮ್ಮ ವೈಯಕ್ತಿಕ ಅಭ್ಯುನ್ನತಿಗಾಗಿ, ಸಾಮಾಜಿಕಸಾಮರಸ್ಯಕ್ಕಾಗಿ ಮತ್ತು ರಾಷ್ಟ್ರವನ್ನು ಕಾಡುತ್ತಿರುವ ಭಾವೈಕ್ಯರಾಹಿತ್ಯವೇ ಮೊದಲಾದ ಸಮಸ್ಯೆಗಳ ನಿವಾರಣೆಗಾಗಿ ಸಂಸ್ಕೃತವನ್ನು ಆಶ್ರಯಿಸುವ ಆವಶ್ಯಕತೆ ವರ್ತಮಾನಸಮಾಜಕ್ಕಿದೆ. ಅದನ್ನು ನಾವೆಲ್ಲರೂ ಅರಿತು ಜೀವನಸಾರ್ಥಕ್ಯವನ್ನು ಕಂಡುಕೊಳ್ಳುವಂತೆ ಸಂಸ್ಕೃತಮಾತೆಯು ಅನುಗ್ರಹಿಸಲಿ.

ವಿದೇಶೀಯವಿದ್ವಾಂಸರ ಸಂಸ್ಕೃತಕವಿತಾಪಟುತ್ವ

ಸಂಸ್ಕೃತದೊಂದಿಗಿನ ವಿದೇಶೀಯರ ಸಂಬಂಧ ನಾನಾರೂಪವಾದದ್ದು. ಇಲ್ಲಿನ ವಿದ್ಯೆಗಳಲ್ಲಿ ಪಾಂಡಿತ್ಯ ಪಡೆದು ಸಂಶೋಧನೆಗಳನ್ನೂ ನಡೆಸಿರುವ ಮಹನೀಯರು ಹಲವರಿದ್ದಾರೆ. (ತಮ್ಮ ಪಾಂಡಿತ್ಯ-ಸಂಶೋಧನೆಗಳನ್ನು ಸಂಸ್ಕೃತಕ್ಕೆ ಮಾರಕವಾಗಿಯೂ ಉಪಯೋಗಿಸಿದವರು / ಉಪಯೋಗಿಸುತ್ತಿರುವವರು ಕಡಮೆಯಿಲ್ಲ ಬಿಡಿ !) ಅಂಥವರಲ್ಲಿ ಕವಿತ್ವದಿಂದಲೂ ಇಷ್ಟವಾಗುವವರು ಇಂಗ್ಲೆಂಡಿನ ಎಚ್. ಎಸ್. ವಿಲ್ಸನ್ ಎಂಬವರು. ಅವರಿಗೂ ಭಾರತೀಯವಿದ್ವಾಂಸರೊಬ್ಬರಿಗೂ ಪತ್ರದ ಮೂಲಕ ನಡೆದ ಕಾವ್ಯಮಯಸಂವಾದ ಅತ್ಯಂತ ರಮಣೀಯವಾದದ್ದು. ಆದರೆ ಈ ಸಂವಾದ ದುಃಸ್ಥಿತಿಯೊಂದಕ್ಕೆ ಸಾಕ್ಷಿಯಾಗಿರುವುದನ್ನು ಕಂಡಾಗ ಆಗುವ ಸಂಕಟವೂ ಅನಿರ್ವಾಚ್ಯ. ಆ ಪ್ರಸಂಗ ಮತ್ತು ಸಂವಾದ ಇಂತಿದೆ
ಬ್ರಿಟಿಷರ ಆಳ್ವಿಕೆಯಲ್ಲಿ ಮೆಕಾಲೆಯ ವರದಿಯ ಪ್ರಕಾರ ಎಲ್ಲೆಡೆ ಭಾರತೀಯಶಿಕ್ಷಣಕ್ಕಾದ ದುರ್ದಶೆಯ ಇತಿಹಾಸ ಎಲ್ಲರಿಗೂ ತಿಳಿದಿದೆಯಷ್ಟೇ ! ಆ ಕಾಲದಲ್ಲಿ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕನು ೧೮೩೫ರ ಆಸುಪಾಸಿನಲ್ಲಿ ಅನೇಕ ಸ್ವದೇಶಿವಿದ್ಯಾಸಂಸ್ಥೆಗಳನ್ನು ಕಠೋರವಾಗಿ ಮುಚ್ಚಿಸಿದ. ಹಾಗೆ ಮುಚ್ಚಲ್ಪಟ್ಟ ವಿದ್ಯಾಕೇಂದ್ರಗಳಲ್ಲಿ ಕಲ್ಕತ್ತದಗೋಳೀಶ್ರೀಎಂಬಲ್ಲಿರುವ ಸಂಸ್ಕೃತಪಾಠಶಾಲೆಯೂ ಒಂದು. ಇದರಿಂದ ದುಃಖಿತರಾದ ಆ ಪಾಠಶಾಲೆಯ ಕುಲಪತಿ ಪ್ರೇಮಚಂದ್ರವಾಗೀಶರು ಎಚ್. ಎಸ್. ವಿಲ್ಸನ್ ಎಂಬವರಿಗೆ ಈ ದುಃಸ್ಥಿತಿಯನ್ನು ವಿವರಿಸುವ ಪದ್ಯವೊಂದನ್ನು ಬರೆದು ಪತ್ರಮುಖೇನ ಕಳುಹಿಸಿದರು. ಎಚ್. ಎಸ್. ವಿಲ್ಸನರು ಆಗಿನ ಸುಪ್ರಸಿದ್ಧ ಸಂಸ್ಕೃತವಿದ್ವಾಂಸರಷ್ಟೇ ಅಲ್ಲದೆ, ಆ ಪಾಠಶಾಲೆಯ ಅನೇಕ ಅಧ್ಯಾಪಕರನ್ನು ನಿಯುಕ್ತಿಗೊಳಿಸಿದವರೂ ಆಗಿದ್ದರಿಂದ, ಈ ವೃತ್ತಾಂತವನ್ನು ಅವರಿಗೆ ತಿಳುಹುವುದು ಸೂಕ್ತವೇ ಆಗಿತ್ತು. ಆ ಪದ್ಯ
ಅಸ್ಮಿನ್ ಸಂಸ್ಕೃತಪಾಠಪದ್ಮಸರಸಿ ತ್ವತ್ಸ್ಥಾಪಿತಾ ಯೇ ಸುಧೀ-
            ಹಂಸಾಃ ಕಾಲವಶೇನ ಪಕ್ಷರಹಿತಾ ದೂರಂಗತೇ ತೇ ತ್ವಯಿ |
ತತ್ತೀರೇ ನಿವಸಂತಿ ಸಂಹತಶರಾ ವ್ಯಾಧಾಸ್ತದುಚ್ಛಿತ್ತಯೇ
            ತೇಭ್ಯಸ್ತ್ವಂ ಯದಿ ಪಾಸಿ ಪಾಲಕ ತದಾ ಕೀರ್ತಿಶ್ಚಿರಂ ಸ್ಥಾಸ್ಯತಿ ||
(ಈ ಸಂಸ್ಕೃತಪಾಠಶಾಲೆಯೆಂಬ ಸರೋವರದಲ್ಲಿ ನಿನ್ನಿಂದ ಸ್ಥಾಪಿಸಲ್ಪಟ್ಟ ಪಂಡಿತರೆಂಬ ಹಂಸಗಳು ಈಗ ರೆಕ್ಕೆಯಿಲ್ಲದವುಗಳಾಗಿವೆ. ಅವುಗಳ ನಾಶಕ್ಕಾಗಿ ಬೇಡರು ದಡದಲ್ಲಿಯೇ ಬೀಡುಬಿಟ್ಟಿದ್ದಾರೆ. ಅಯ್ಯಾ ಪಾಲಕನೇ! ಅವರಿಂದ ನೀನು ರಕ್ಷಿಸಿದೆಯಾದಲ್ಲಿ ನಿನ್ನ ಕೀರ್ತಿ ಚಿರಕಾಲ ನಿಲ್ಲುವುದು.)
ಈ ನಿವೇದನೆಗೆ ವಿಲ್ಸನರ ಉತ್ತರ
ವಿಧಾತಾ ವಿಶ್ವನಿರ್ಮಾತಾ ಹಂಸಸ್ತತ್ಪ್ರಿಯವಾಹನಮ್ |
ಅತಃ ಪ್ರಿಯತರತ್ವೇನ ರಕ್ಷಿಷ್ಯತಿ ಸ ಏವ ತತ್ ||
ಅಮೃತಂ ಮಧುರಂ ಸಮ್ಯಕ್ ಸಂಸ್ಕೃತಂ ಹಿ ತತೋಽಧಿಕಮ್ |
ದೇವಭೋಗ್ಯಮಿದಂ ಯಸ್ಮಾದ್ ದೇವಭಾಷೇತಿ ಕಥ್ಯತೇ ||
ನ ಜಾನೇ ವಿದ್ಯತೇ ಕಿಂಚಿನ್ಮಾಧುರ್ಯಮಿಹ ಸಂಸ್ಕೃತೇ |
ಸರ್ವದೈವ ಸಮುನ್ಮತ್ತಾ ಯೇನ ವೈದೇಶಿಕಾ ವಯಮ್ ||
ಯಾವದ್ ಭಾರತವರ್ಷಂ ಸ್ಯಾದ್ ಯಾವದ್ ವಿಂಧ್ಯಹಿಮಾಚಲೌ |
ಯಾವದ್ ಗಂಗಾ ಚ ಗೋದಾ ಚ ತಾವದೇವ ಹಿ ಸಂಸ್ಕೃತಮ್ ||
(ಹಂಸವು ಸೃಷ್ಟಿಕರ್ತ ಬ್ರಹ್ಮನ ವಾಹನ ತಾನೇ! ಆದ್ದರಿಂದ ತನ್ನ ಪ್ರಿಯವಾಹನವನ್ನು ಆತನೇ ರಕ್ಷಿಸುತ್ತಾನೆ. ಸುಧೆಯು ಮಧುರ. ಅದಕ್ಕಿಂತಲೂ ಸಂಸ್ಕೃತವು ಮಧುರ. ದೇವತೆಗಳಿಂದಲೂ ಸೇವಿಸಲ್ಪಡುವುದರಿಂದಾಗಿ ಇದು ದೇವಭಾಷೆಯೆನಿಸಿದೆ. ಈ ಸಂಸ್ಕೃತದಲ್ಲದಾವ ಸೊಗಸಿದೆಯೋ ತಿಳಿಯೆ. ಏಕೆಂದರೆ, ವೈದೇಶಿಕರಾದ ನಾವೂ ಇದನ್ನಾಸ್ವಾದಿಸುತ್ತಾ ಮತ್ತರಾಗಿದ್ದೇವೆ. ಎಲ್ಲಿಯವರೆಗೆ ಭಾರತವರ್ಷವಿರುವುದೋ, ಎಲ್ಲಿಯವರೆಗೆ ವಿಂಧ್ಯಹಿಮಾಚಲಗಳೂ ಗಂಗಾಗೋದಾವರಿಗಳೂ ಇರುವವೋ, ಅಲ್ಲಿಯವರೆಗೂ ಸಂಸ್ಕೃತವಿರುವುದು.)
ವಿಲ್ಸನರ ಈ ಉತ್ತರದಲ್ಲಿ ವ್ಯಕ್ತವಾದ ಭಾವ ಪ್ರಿಯವಾಗುವಂಥದ್ದೇ. ಆದರೂ ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಅಲ್ಲಿರಲಿಲ್ಲವಾದ್ದರಿಂದ ಪ್ರೇಮಚಂದ್ರರು ಮತ್ತೆ ತಮ್ಮ ದೈನ್ಯವನ್ನು ತೋಡಿಕೊಂಡರು
ಗೋಳೀಶ್ರೀದೀರ್ಘಿಕಾಯಾಂ ಬಹುವಿಟಪಿತಟೇ ಕಾಲಿಖಾತಾನಗರ್ಯಾಂ
ನಿಃಸಂಗೋ ವರ್ತತೇ ಸಂಸ್ಕೃತಪಠನಮಹಾಸದ್ಗೃಹಾಖ್ಯಃ ಕುರಂಗಃ |
ಹಂತುಂ ತಂ ಭೀತಚಿತ್ತಂ ವಿಧೃತಖರಶರೋ ಮೇಕಲೇವ್ಯಾಧರಾಜಃ
ಸಾಶ್ರುರ್ಬ್ರೂತೇ ಸ ಭೋ ಭೋಃ ಸುವಿಸಲನಮಹಾಭಾಗ ಮಾಂ ರಕ್ಷ ರಕ್ಷ ||
(ಕಲ್ಕತ್ತಾನಗರಿಯಲ್ಲಿ ಗೋಳೀಶ್ರೀ ಎಂಬ ಸರಸಿಯ ತೀರದ ಬಹುವೃಕ್ಷಗಳಿರುವ ತಾಣದಲ್ಲಿ ಸಂಸ್ಕೃತವಿದ್ಯಾಲಯವೆಂಬ ಜಿಂಕೆಯು ತನ್ನ ಪಾಡಿಗೆ ತಾನಿದ್ದುಕೊಂಡಿದೆ. ಅದನ್ನು ಕೊಲ್ಲಲು ಮೆಕಾಲೆ ಎಂಬ ಬೇಡರೊಡೆಯನು ಕೂರ್ಗಣೆಯ ಹೂಡಿ ನಿಂತಿದ್ದಾನೆ. ಆ ಜಿಂಕೆಯು ಪನಿಗಣ್ಣಾಗಿ ಅಯ್ಯಾ ! ವಿಲ್ಸನ್ ಮಹಾನುಭಾವನೇ ! ರಕ್ಷಿಸು ರಕ್ಷಿಸು ಎಂದು ಗೋಳಿಡುತ್ತಿದೆ.)
ಇದಕ್ಕೆ ವಿಲ್ಸನರ ಪ್ರತಿಕ್ರಿಯೆ
ನಿಷ್ಪಿಷ್ಟಾಪಿ ಪರಂ ಪದಾಹತಿಶತೈಃ ಶಶ್ವದ್ ಬಹುಪ್ರಾಣಿನಾಂ
            ಸಂತಪ್ತಾಪಿ ಕರೈಃ ಸಹಸ್ರಕಿರಣೇನಾಗ್ನಿಸ್ಫುಲಿಂಗೋಪಮೈಃ |
ಛಾಗಾದ್ಯೈಶ್ಚ ವಿಚರ್ವಿತಾಪಿ ಸತತಂ ಮೃಷ್ಟಾಪಿ ಕುದ್ದಾಲಕೈಃ
ದೂರ್ವಾ ನ ಮ್ರಿಯತೇ ತಥಾಪಿ ನಿತರಾಂ ಧಾತುರ್ದಯಾ ದುರ್ಬಲೇ ||
(ನಿತ್ಯವೂ ನೂರಾರು ಪ್ರಾಣಿಗಳ ಕಾಲ್ತುಳಿತದಿಂದ ನವೆದಿದ್ದರೂ, ಬೆಂಕಿಯ ಕಿಡಿಗಳಂತಿರುವ ರವಿಕಿರಣಗಳಿಂದ ಬೆಂದಿದ್ದರೂ, ಆಡು ಮೊದಲಾದವುಗಳಿಂದ ಜಗಿಯಲ್ಪಟ್ಟರೂ, ಗುದ್ದಲಿಗಳಿಂದ ಹೊಡೆಯಲ್ಪಟ್ಟರೂ ಗರಿಕೆ ಸಾಯುವುದಿಲ್ಲ. ದುರ್ಬಲರಲ್ಲಿ ವಿಧಿಯ ಒಲವು ಅತಿಶಯಿತವಾದದ್ದು !)
      ಅತ್ಯುತ್ಕೃಷ್ಟವಾದ ಈ ಪದ್ಯ ನಿಶ್ಚಿತವಾಗಿಯೂ ಆಚಂದ್ರಾರ್ಕಸ್ಥಾಯಿ. ಮುಂದೆ ಅವರಿಂದ ನೆರವು ಒದಗಿತೋ ಇಲ್ಲವೋ ತಿಳಿದುಬಂದಿಲ್ಲ. ಆದರೆ, ಆ ಕಾಲದಲ್ಲಿ ಸಂಸ್ಕೃತಕ್ಕೆರಗಿದ್ದ ವಿಪತ್ತಿ, ಭಾರತೀಯರ ಅಸಹಾಯಕತೆ, ಮೆಕಾಲೆ ಮೊದಲಾದವರ ಧೂರ್ತತೆ ಇವೆಲ್ಲದಕ್ಕೆ ಸಾಕ್ಷಿಯಾಗಿರುವ ಈ ಛಂದಃಸಂವಾದ, ವಿದೇಶೀಯವಿದ್ವಾಂಸರ ಕವಿತಾಪಟುತ್ವಕ್ಕೂ ಉತ್ತಮ ಉದಾಹರಣೆಯಾಗಿ ನೆಲೆ ನಿಂತಿದೆಯೆಂಬುದರಲ್ಲಿ ಎರಡು ಮಾತಿಲ್ಲ.


ಸವಿದಷ್ಟೂ ಸಾಕೆನಿಸದ ಸಕ್ಕದದ ಸೊದೆ

’ಅಥ ಪ್ರಜಾನಾಮಧಿಪಃ ಪ್ರಭಾತೇ ಜಾಯಾಪ್ರತಿಗ್ರಾಹಿತಗಂಧಮಾಲ್ಯಾಂ’ – ರಘುವಂಶಮಹಾಕಾವ್ಯದ ಎರಡನೆಯ ಸರ್ಗದಾರಂಭದಲ್ಲಿ ಬರುವ ಪ್ರಸಿದ್ಧ ಶ್ಲೋಕವಿದು. ಪ್ರಭಾತಕಾಲದಲ್ಲಿ ಪ್ರಜಾಪಾಲಕ ದಿಲೀಪನು ತನ್ನ ಪತ್ನಿಯಿಂದ ಗಂಧಮಾಲ್ಯಾದಿಗಳಿಂದ ಪೂಜಿಸಲ್ಪಟ್ಟ ನಂದಿನಿಯನ್ನು ವನಕ್ಕೆ ಹೋಗಲನುವಾಗುವಂತೆ ಬಿಟ್ಟನೆಂಬುದು ಈ ಪದ್ಯದ ತಾತ್ಪರ್ಯ. ಇಲ್ಲಿ ಸ್ವಾರಸ್ಯವಿರುವುದು ಜಾಯಾ ಎಂಬ ಶಬ್ದದಲ್ಲಿ. ಜಾಯಾಶಬ್ದಕ್ಕೆ ಪತ್ನಿಯೆಂಬ ಅರ್ಥ ಸರ್ವವಿದಿತ, ಪತಿಯೇ ಈಕೆಯ ಗರ್ಭವನ್ನು ಪ್ರವೇಶಿಸಿ ಮಗುವಿನ ರೂಪದಲ್ಲಿ ಮತ್ತೆ ಹುಟ್ಟಿಬರುತ್ತಾನೆಂಬ ಪ್ರತೀತಿಯನ್ನನುಸರಿಸಿ, ’ಜಾಯತೇ ಅಸ್ಯಾಂ’ ಎಂಬರ್ಥದಲ್ಲಿ ಹುಟ್ಟಿರುವ ಶಬ್ದವಿದು. ಇಂತಹ ಅರ್ಥವೈಶಾಲ್ಯವುಳ್ಳ ಈ ಶಬ್ದವನ್ನು ಪ್ರಯೋಗಿಸುವ ಮೂಲಕ ಕಾಳಿದಾಸನು ದಿಲೀಪಪತ್ನಿ ಸುದಕ್ಷಿಣೆಯು ಮುಂದೆ ಗರ್ಭ ಧರಿಸಲಿದ್ದಾಳೆಂಬರ್ಥವನ್ನು ಧ್ವನಿಸಿದ್ದಾನೆ. (ದಿಲೀಪಸುದಕ್ಷಿಣೆಯರು ಸಂತಾನಾಕಾಂಕ್ಷಿಗಳಾಗಿಯೇ ನಂದಿನೀಸೇವೆಗೆ ತೊಡಗಿರುವುದು.) ಹೀಗೆ ’ಕಾಂತಾಪ್ರತಿಗ್ರಾಹಿತ’ವೆಂದೋ, ’ಪತ್ನೀಪ್ರತಿಗ್ರಾಹಿತ’ವೆಂದೋ ಹೇಳಿದರೂ ವಿವಕ್ಷಿತ ಅರ್ಥ ಸಾಮಾನ್ಯತಃ ಸಿಗುವಂತಿದ್ದರೂ, ಅದರಿಂದ ಛಂದಸ್ಸಿಗೂ ತೊಡಕಿಲ್ಲದಿದ್ದರೂ ಜಾಯಾಶಬ್ದದಿಂದ ಸಿಗಬಹುದಾದ ಅರ್ಥವಿಶೇಷತೆಯನ್ನು ಮನಗಂಡು ಕಾಳಿದಾಸನು ಬಳಸಿರುವುದು ಇಲ್ಲಿನ ಸ್ವಾರಸ್ಯ. ಇದೇ ಕವಿಯು ತನ್ನ ಮೇಘದೂತದಾದಿಯಲ್ಲಿ ’ಒಬ್ಬ ಯಕ್ಷನು ತನ್ನೊಡೆಯನ ಶಾಪಕ್ಕೀಡಾಗಿ ಪತ್ನೀವಿರಹಿತನಾಗಿ ರಾಮಗಿರ್ಯಾಶ್ರಮಗಳಲ್ಲಿ ವಾಸಿಸುತ್ತಿದ್ದ’ನೆಂದು ಹೇಳುವುದನ್ನು ’ಕಶ್ಚಿತ್ ಕಾಂತಾವಿರಹಗುರುಣಾ’ ಎಂದು ಆರಂಭಿಸುತ್ತಾನೆ. ಇಲ್ಲಿ ಪತ್ನಿಯೆಂಬರ್ಥದಲ್ಲಿ ’ಕಾಂತಾ’ಶಬ್ದವಿದೆ. ಯಕ್ಷನಿಗೆ ಪತ್ನಿಯು ಪತ್ನಿಯಷ್ಟೇ ಅಲ್ಲದೆ ಪ್ರಿಯೆಯೂ ಆಗಿದ್ದಳೆಂಬರ್ಥವನ್ನು ಈ ಕಾಂತಾಶಬ್ದ ತೋರಗೊಡುತ್ತದೆ. (ಎಲ್ಲರಿಗೂ ಹೆಂಡತಿ ಪ್ರಿಯೆಯಾಗಿಯೇ ಇರಬೇಕೆಂದಿಲ್ಲ ತಾನೆ!) ಹೀಗೆ ಹೆಂಡತಿಯೆಂಬರ್ಥದಲ್ಲಿ ಜಾಯಾ, ಭಾರ್ಯಾ, ಪತ್ನೀ, ಕಾಂತಾ, ದ್ವಿತೀಯಾ – ಇತ್ಯಾದಿ ಹಲವು ಶಬ್ದಗಳಿದ್ದು, ಅವುಗಳೆಲ್ಲವೂ ಒಂದೊಂದು ಅರ್ಥವಿಶೇಷದ ಹಿನ್ನೆಲೆಯಿಂದ ಮೂಡಿಬಂದಿದ್ದು, ಕವಿಯು ತನ್ನ ವಿವಕ್ಷೆಗನುಗುಣವಾಗಿ ಸಮುಚಿತಶಬ್ದವನ್ನು ಬಳಸಿದ್ದಾನೆ.
          ಇದು ಸಂಸ್ಕೃತಭಾಷೆಯ ವೈಶಿಷ್ಟ್ಯಗಳಲ್ಲೊಂದು. ಒಂದರ್ಥದಲ್ಲಿ ಹಲವು ಶಬ್ದಗಳಿದ್ದು ಇವು ಈ ಭಾಷೆಯ ವಿಪುಲಶಬ್ದಸಂಪತ್ತಿಗೆ ಸ್ರೋತವಾಗಿರುವುದಷ್ಟೇ ಅಲ್ಲದೆ ಒಂದೊಂದು ವಿಶೇಷಾರ್ಥದ ಆಧಾರದಿಂದಲೇ ಮೂಡಿದ್ದಾಗಿವೆ. ಇನ್ನೊಂದು ಉದಾಹರಣೆ ನೋಡುವುದಾದರೆ, ’ಮೈ’ ಎಂಬರ್ಥದಲ್ಲಿ ಕಾಯ, ದೇಹ, ಶರೀರ, ತನು ಇತ್ಯಾದಿ ಶಬ್ದಗಳಿವೆ. ದಿನದಿಂದ ದಿನಕ್ಕೆ ಪುಷ್ಟವಾಗುವಂಥದ್ದು ಎಂಬರ್ಥದಲ್ಲಿ ದೇಹಶಬ್ದವಿದ್ದರೆ, ಯೌವನಾನಂತರ ಪ್ರತಿದಿನವೂ ಶೀರ್ಣ(ಜೀರ್ಣ)ವಾಗುವಂಥದ್ದು ಎಂಬರ್ಥದಲ್ಲಿ ಶರೀರಶಬ್ದವಿದೆ. ಆದ್ದರಿಂದಲೇ ಕ್ಷಾತ್ರಕುಲಾಗ್ರಣಿಯಾದ ದಿಲೀಪನ ಮೈಯನ್ನು ಬಣ್ಣಿಸುವ ’ಆತ್ಮಕರ್ಮಕ್ಷಮಂ ದೇಹಂ ಕ್ಷಾತ್ರೋ ಧರ್ಮ ಇವಾಶ್ರಿತಃ’ ಎಂಬ ಕಾಳಿದಾಸನ ನುಡಿಯಲ್ಲಿ ದೇಹಶಬ್ದವಿದೆ. ಆದರೆ ’ಶರೀರಮಾದ್ಯಂ ಖಲು ಧರ್ಮಸಾಧನಮ್’ ಎಂಬ ಅವನದೇ ಸುಭಾಷಿತಪ್ರಾಯ ವಾಕ್ಯದಲ್ಲಿ ಧರ್ಮಸಾಧನವಾದ ಈ ದೇಹ ಹೆಚ್ಚು ಕಾಲ ಉಳಿಯುವಂಥದ್ದಲ್ಲ, ಆದ್ದರಿಂದ ಹೆಚ್ಚು ಹೆಚ್ಚು ಧರ್ಮಕರ್ಮಗಳನ್ನು ಮಾಡಬೇಕೆಂಬ ಅರ್ಥವನ್ನು ತೋರಲೋಸುಗ ಶರೀರಶಬ್ದದ ಪ್ರಯೋಗವಿದೆ. ಇನ್ನು ಕಣ್ಣು ಎಂಬರ್ಥದಲ್ಲಿರುವ ಶಬ್ದಗಳು ನೇತ್ರ, ನಯನ, ಚಕ್ಷುಃ ಇತ್ಯಾದಿಗಳು. ಇಲ್ಲಿ ಚಷ್ಟೇ ಇತಿ ಚಕ್ಷುಃ ಎಂಬ ವ್ಯುತ್ಪತ್ತಿಗನುಸಾರ ಮಾತನಾಡುವ ಇಂದ್ರಿಯ ಎಂಬರ್ಥದಲ್ಲಿ ಚಕ್ಷುಃಶಬ್ದ ಹುಟ್ಟಿರುವುದು. (ಬಾಯಿಗೂ ಹೇಳಲಾಗದ್ದನ್ನು ಕಣ್ಣು ಹೇಳುವುದಲ್ಲವೇ !) ಇದು ನಮ್ಮನ್ನು ಒಯ್ಯುವ ಇಂದ್ರಿಯವೂ ಆದ್ದರಿಂದ ನೇತ್ರ ಮತ್ತು ನಯನ ಶಬ್ದಗಳು ಬಂದಿವೆ. (ಕಣ್ಣಿನಿಂದ ಕಾಣದೆ ಕಾಲಿಡಲಾಗದು - ದೃಷ್ಟಿಪೂತಂ ನ್ಯಸೇತ್ ಪಾದಮ್). ಇನ್ನು ಕಾಣುವ ಸ್ವಭಾವವನ್ನಾಶ್ರಯಿಸಿ ದೃಕ್ ಈಕ್ಷಣ ಇತ್ಯಾದಿ ಶಬ್ದಗಳು ಹುಟ್ಟಿರುವುದು.  
ಇನ್ನೊಂದು ತೆರನಾದ  ಸ್ವಾರಸ್ಯ ನೋಡೋಣ. ವಾಗರ್ಥಾವಿವ ಸಂಪೃಕ್ತೌ ಎಂದು ಕಾಳಿದಾಸನು ಮಾಡಿರುವ ಶಿವನ ಅರ್ಧನಾರೀಶ್ವರಸ್ವರೂಪದ ಸ್ತುತಿ ಹೆಚ್ಚಿನ ನಾಲಗೆಗಳಲ್ಲಿ ಹರಿದಾಡುತ್ತಿರುವುದೇ ಹೌದು. ವಾಗರ್ಥಗಳಂತೆ ಪರಸ್ಪರ ಅವಿನಾಭಾವದಿಂದಿರುವ ಜಗದ ತಾಯ್ತಂದೆಯರಾದ ಪಾರ್ವತೀಪರಮೇಶ್ವರರನ್ನು ಈ ಪದ್ಯದಲ್ಲಿ ವಂದಿಸುವ ಕವಿಯು ಅವರೀರ್ವರ ಬೆಸುಗೆಯ ಗಾಢತೆಯನ್ನು ತೋರಲು ಸಂಪೃಕ್ತೌ ಎಂಬ ಶಬ್ದವನ್ನು ಪ್ರಯೋಗಿಸಿದ್ದಾನೆ. ಸಂಯುಕ್ತೌ ಎಂದರೂ ಅರ್ಥ-ಛಂದಸ್ಸುಗಳಿಗೆ ಬಾಧೆಯಿಲ್ಲ. ಆದರೂ ಸಂಪೃಕ್ತೌ ಎಂಬುದನ್ನು ಉಚ್ಚರಿಸಬೇಕಾದರೆ ಎರಡು ತುಟಿಗಳು ಕೂಡಬೇಕು. ಶಿವಪಾರ್ವತಿಯರ ನಿತ್ಯಾನ್ಯೋನ್ಯಸಂಸಕ್ತಶರೀರವನ್ನು ತುಟಿಗೂಡಿಸಿ ಉಚ್ಚರಿಸಬೇಕಾದ ಸಂಪೃಕ್ತಶಬ್ದವೇ ಹೆಚ್ಚು ಸಮರ್ಥವಾಗಿ ತಿಳಿಸುವುದೆಂಬುದು ಇಲ್ಲಿ ಕವಿಯ ಆಶಯ. ಈ ಕವಿಹೃದಯ ನಮನೀಯವೆಂಬುದು ಒಂದಂಶವಾದರೆ, ಇಂತಹ ಸಾಧ್ಯತೆಗಳಿಗೆ ಬೇಕಾದ ಶಬ್ದಸಂಪತ್ತಿಯನ್ನಿತ್ತಿರುವ ಸಂಸ್ಕೃತದ ಸೊಗಸುತನವೂ ಸ್ಮರಣೀಯ.
ಇನ್ನು ಕೆಲವು ಶಬ್ದಗಳ (ಅದರಲ್ಲೂ ಸಮಾಸ ಹೊಂದಿದ ಪದಗಳ) ಶಬ್ದಾರ್ಥ ಒಂದು ತೆರನಾಗಿದ್ದರೆ, ಅವುಗಳ ವ್ಯಂಗ್ಯಾರ್ಥ ಮತ್ತೊಂದು ತೆರನಾಗಿರುತ್ತದೆ. ಉದಾಹರಣೆಗೆ ದೇವಾನಾಂಪ್ರಿಯ. ’ದೇವತೆಗಳಿಗೆ ಪ್ರಿಯನಾದವನು’ ಎಂಬುದು ಇದರ ಅವಯವಾರ್ಥವಾದರೂ ಈ ಪದವಿರುವುದು ಮೂರ್ಖಾರ್ಥದಲ್ಲಿ. ಇವನ ರೀತಿನೀತಿಗಳು ದೇವರಿಗಷ್ಟೇ ಪ್ರಿಯ, ಮನುಷ್ಯರಿಗಲ್ಲವೆಂದು ತಿವಿಯುವ ಶಬ್ದವಿದು. ಇಂಥದ್ದೇ ಇನ್ನೊಂದು ಪದ ಪಂಡಿತಪುತ್ರ. ಪಂಡಿತನ ಮಗ ಎಂಬುದು ಇದರ ಶಬ್ದಾರ್ಥ, ಆದರೆ ಇವನ ತಂದೆಯಷ್ಟೇ ಪಂಡಿತ, ಇವನು ಶತಮೂರ್ಖನೆಂಬರ್ಥದಲ್ಲಿ ಈ ಶಬ್ದ ರೂಢಿಯಲ್ಲಿದೆ. ಲಾಲಾಟಿಕವೆಂಬ ಶಬ್ದಕ್ಕೆ ಹಣೆ ನೋಡುವವನು ಎಂದರ್ಥ. ಏನಾದರೂ ಕೆಲಸ ಹೇಳಿದಲ್ಲಿ ಅದನ್ನು ಅರ್ಥೈಸಿಕೊಳ್ಳುವ ಅಥವಾ ಮಾಡುವ ಬುದ್ದಿಮತ್ತೆಯಿಲ್ಲದ, ಹಾಗೆಯೇ ನಿಂತು ನೋಡುತ್ತಿರುವವನು ಎಂಬ ವ್ಯಂಗ್ಯಾರ್ಥವಿಲ್ಲಿದೆ. ಶೀತಕ ಉಷ್ಣಕ ಎಂಬೆರಡು ಶಬ್ದಗಳೂ ಇದೇ ಜಾತಿಯವುಗಳು. ಅತ್ಯಂತ ಆಲಸ್ಯದಿಂದ ನಿಧಾನವಾಗಿ ಕೆಲಸಗಳನ್ನು ಮಾಡುವವನು ಶೀತಕ. ಅದಕ್ಕೆ ವಿರುದ್ಧವಾಗಿ, ಅತ್ಯಂತ ಚುರುಕುತನದಿಂದ ಕಾರ್ಯಕರಣಸ್ವಭಾವದವನು ಉಷ್ಣಕ. ’ಧರ್ಮಧ್ವಜ’ವೆಂಬ ಶಬ್ದಕ್ಕೆ ಮೇಲ್ನೋಟಕ್ಕೆ ಕಾಣುವ ಧಾರ್ಮಿಕ ಎಂಬರ್ಥವು ಅಲ್ಲ. ಬದಲಾಗಿ, ಹೃದಯದಲ್ಲಿ ಧರ್ಮಶ್ರದ್ಧೆಯಿಲ್ಲದಿದ್ದರೂ ಧಾರ್ಮಿಕತೆಯ ಸೋಗು ಹಾಕುತ್ತಿರುವವನು ಎಂಬರ್ಥ. ಇನ್ನು ತೀರ್ಥಕಾಕವೆಂಬ ಶಬ್ದ ಅತ್ಯಂತ ವಿಲಕ್ಷಣವಾದದ್ದು. ಕಾಗೆಯು ಎಲ್ಲಿಯೂ ಹೆಚ್ಚುಕಾಲ ನಿಲ್ಲುವುದಿಲ್ಲ. ಅಂತೆಯೇ ಯಾವ ಶಿಷ್ಯನು ಒಬ್ಬನೇ ಗುರುವಿನಲ್ಲಿ ನಿಲ್ಲದೆ, ಬೇರೆ ಬೇರೆ ಗುರುಗಳಲ್ಲಿ ಸ್ವಲ್ಪ ಸ್ವಲ್ಪ ಕಾಲ ನಿಂತು, ಎಲ್ಲಿಯೂ ಸಲ್ಲದವನು ಎಂಬ ಅರ್ಥವಿಶೇಷತೆ ಈ ಶಬ್ದಕ್ಕಿದೆ.
ವಿಸ್ತೃತಾರ್ಥವನ್ನು ಸಂಕ್ಷಿಪ್ತವಾಗಿ ಹೇಳುವಂತಹ ವ್ಯವಸ್ಥೆಯಿರುವುದೂ ಇಲ್ಲಿನ ಇನ್ನೊಂದು ವಿಶೇಷತೆ. ಇಲ್ಲಿ, ಸುಪ್ರಭಾತಂ ಎಂದು ಹೇಳುವವನು ಸೌಪ್ರಭಾತಿಕ. ಚೆನ್ನಾಗಿ ಸ್ನಾನವಾಯಿತೇ? (ಅಪಿ ಸುಸ್ನಾತಂ?) ಎಂದು ಕೇಳುವ ಹಿತೈಷಿ ಸೌಸ್ನಾತಿಕ. ಸ್ವಾಗತಂ ಎಂದೆನ್ನುವವನು ಸ್ವಾಗತಿಕ. ಇನ್ನು, ಅಳುತ್ತಾನೆ ಎನ್ನುವುದಕ್ಕೆ ರೋದಿತಿ ಎಂಬುದು ಕ್ರಿಯಾಪದವಾದರೆ, ಮತ್ತೆ ಮತ್ತೆ (ಅಥವಾ ಬಿಕ್ಕಿ ಬಿಕ್ಕಿ) ಅಳುತ್ತಾನೆ ಎಂಬರ್ಥದಲ್ಲಿ ರೋರುದ್ಯತೇ ಅಥವಾ ರೋರುದೀತಿ ಎಂದು ಹೇಳಬಹುದು. ಅಂತೆಯೇ ಪಠತಿ = ಓದುತ್ತಾನೆ. ಪಾಪಠ್ಯತೇ = ಚೆನ್ನಾಗಿ ಅಥವಾ ಮತ್ತೆ ಮತ್ತೆ ಓದುತ್ತಾನೆ. ಅಂತೆಯೇ, ಹೇಳುವ ಬಯಕೆ ಎಂಬರ್ಥವನ್ನು ವಿವಕ್ಷೆಯೆಂಬ ಒಂದೇ ಶಬ್ದ ಕೊಡಬಲ್ಲುದು. ಹೀಗೆಯೇ ತಿಳಿಯುವ ಬಯಕೆ = ಜಿಜ್ಞಾಸೆ, ಉಣ್ಣುವ ಬಯಕೆ = ಬುಭುಕ್ಷೆ ಇತ್ಯಾದಿ ಶಬ್ದಗಳು. ಇನ್ನು, ’ವೃದ್ಧಾಯತೇ’ ಎಂದು ಹೇಳಿದರೆ ಸಾಕು, ವೃದ್ಧನಂತೆ ವ್ಯವಹರಿಸುತ್ತಾನೆಯೆಂಬರ್ಥ ಸಿದ್ಧ. ಪರಸ್ಪರ ಜುಟ್ಟು ಹಿಡಿದು ಮಾಡುತ್ತಿರುವ ಕಲಹ ಎಂಬರ್ಥಕ್ಕೆ ’ಕೇಶಾಕೇಶಿ’ ಎಂದರೆ ಸಾಕು. ಪಂಡಿತನಲ್ಲದಿದ್ದರೂ, ತಾನು ಪಂಡಿತನೆಂದು ತಿಳಿದವನು ಪಂಡಿತಂಮನ್ಯ. ಹೀಗೆ ಇನ್ನೂ ಅನೇಕ ಬಗೆಗಳಿವೆ. ಈ ತೆರನಾದ ವಿಶಿಷ್ಟಪದಪ್ರಯೋಗಗಳೂ ಸಕ್ಕದಕ್ಕೆ ಸಿರಿವಂತಿಕೆಯನ್ನಿತ್ತಿವೆ.
ಇನ್ನು ಸಂಧಿ-ಸಮಾಸಾದಿಗಳ ವೈಪುಲ್ಯ-ವೈವಿಧ್ಯದಿಂದ ಮಾಡಬಹುದಾದ ನಾನಾವಿಧ ಪದಚ್ಛೇದಗಳು, ಅವುಗಳಿಂದ ಹೊಮ್ಮಿಸಬಹುದಾದ ಅರ್ಥವಿಶೇಷಗಳು ವಿಸ್ಮಯಾವಹ. ಉದಾಹರಣೆಗೆ ’ದಾನವಾರಿ’ಶಬ್ದವನ್ನು ದಾನ ವಾರಿ - ಎಂದು ವಿಂಗಡಿಸಿದರೆ ದಾನಕ್ಕೆ ಉಪಯುಕ್ತವಾದ ನೀರು ಎಂಬರ್ಥ. ಅದನ್ನೇ ದಾನವ ಅರಿ ಎಂದು ಬಿಡಿಸಿದರೆ ರಾಕ್ಷಸಶತ್ರು ಎಂದಾಗುತ್ತದೆ. ’ಕಾಂತಾರಹಿತ’ಶಬ್ದವೂ ಇಂತೆಯೇ. ಕಾಂತಾ ರಹಿತ = ಕಾಂತೆಯಿಲ್ಲದವನು. ಕಾಂತಾರ ಹಿತ = ಯಾರಿಗೆ ಅರಣ್ಯವೇ ಹಿತವಾಗುವುದೋ ಅವನು. ಈ ವೈಶಿಷ್ಟ್ಯವು ಅನಿತರಸಾಧಾರಣವಾಗಿದ್ದು ಶ್ಲೇಷ-ವಿರೋಧಾಭಾಸಗಳೇ ಮೊದಲಾದ ನಾನಾಕಾವ್ಯಚಮತ್ಕೃತಿಗಳಿಗೆ ಇಂಬನ್ನಿತ್ತಿದೆ. ಉದಾಹರಣೆಗೆ “ಸರ್ವದೋಮಾಧವಃ ಪಾಯಾತ್ ಸ ಯೋಗಂಗಾಮದೀಧರತ್” ಎಂಬ ಶ್ಲೋಕ. ಇಲ್ಲಿ, ’ಸರ್ವದೋಮಾಧವಃ’ ಪದಪುಂಜವನ್ನು ಸರ್ವದಃ ಮಾಧವಃ ಎಂದು ವಿಂಗಡಿಸಿದರೆ ಎಲ್ಲವನ್ನೂ ನೀಡುವ ಮಹಾವಿಷ್ಣುವು ರಕ್ಷಿಸಲಿ ಎಂದರ್ಥ, ಇದನ್ನೇ ’ಸರ್ವದಾ ಉಮಾಧವಃ’ ಎಂದು ವಿಂಗಡಿಸಿದಲ್ಲಿ ಶಿವನು ಯಾವಾಗಲೂ ರಕ್ಷಿಸಲಿ ಎಂದಾಗುವುದು. ಯೋಗಂಗಾಮದೀಧರತ್ ಎಂಬ ವಿಶೇಷಣವೂ ಹೀಗೆಯೇ. ಯಃ ಅಗಂ ಗಾಮ್ ಅದೀಧರತ್ ಎಂದು ವಿಂಗಡಿಸಿದಾಗ ಯಾರು ಬೆಟ್ಟವನ್ನೂ ಗೋವುಗಳನ್ನೂ ಧರಿಸಿದ್ದಾನೆಯೋ ಅವನು ಎಂಬರ್ಥವಾಗಿ ವಿಷ್ಣುವಿಗೆ ವಿಶೇಷಣ. ಯಃ ಗಂಗಾಮ್ ಅದೀಧರತ್ ಎಂದಾಗ, ಯಾರು ಗಂಗೆಯನ್ನು ಧರಿಸಿದ್ದಾನೋ ಅವನು ಎಂಬರ್ಥವಾಗಿ ಶಿವನಿಗೆ ವಿಶೇಷಣವಾಗುವುದು, ಹೀಗೆ ಒಂದೇ ವಾಕ್ಯದಿಂದ ಹರಿಹರರೀರ್ವರನ್ನೂ ಸ್ತುತಿಸಬಹುದಾದ ಈ ರಮಣೀಯ ಪರಿ ಭಾಷಾಸಾಮರ್ಥ್ಯದಿಂದಲೇ ಸೃಷ್ಟವಾಗಿರುವಂಥದ್ದು.
ಅತ್ಯಲ್ಪಶಬ್ದಗಳಲ್ಲಿ ಸೂತ್ರರೂಪವಾಗಿ ಸ್ವವಿಷಯಕ ನಿಯಮಗಳನ್ನು ಹಿಡಿದಿಡುವುದು ಶಾಸ್ತ್ರಸ್ವಭಾವ. ಶ್ಲೇಷರೂಪಕಾದಿ ನಾನಾಪ್ರಕಾರಗಳಿಂದ ಚಮತ್ಕಾರಗಳನ್ನು ಸೃಷ್ಟಿಸಿ, ನಾನಾವರ್ಣನೆಗಳಿಂದ ಪ್ರಕೃತಾರ್ಥವನ್ನು ವಿಸ್ತರಿಸಿ, ಸರಸತೆಯನ್ನೂ ಕಾಪಿಟ್ಟು ಅನಿರ್ವಚನೀಯಾನಂದವನ್ನೀಯುವುದು ಕಾವ್ಯಗಳ ಸ್ವಭಾವ. ಈ ಸಂಕ್ಷೇಪವಿಕ್ಷೇಪಗಳೆರಡಕ್ಕೂ ವಿಪುಲಾವಕಾಶವನ್ನೀಯುವುದರಿಂದಲೇ ಸಂಸ್ಕೃತವು ಈ ಎರಡು ಪ್ರಕಾರಗಳಿಗೂ ಹಿರಿಯಾಸರೆ. ಆದ್ದರಿಂದಲೇ ಇದರಲ್ಲಿನ ಶಾಸ್ತ್ರಕಾವ್ಯಪರಂಪರೆಗಳು ಎಂದೆಂದಿಗೂ ಅಜರಾಮರವಾಗಿವೆ.
ಸಂಸ್ಕೃತದಲ್ಲಿರುವ ವಿಷಯಗಳ ಆಳ-ಅಗಲಗಳ, ಅವುಗಳಿಂದ ನಮಗಾಗುವ ಹಲಬಗೆಯ ಪ್ರಯೋಜನಗಳ ಕುರಿತ ಲೇಖನ-ವ್ಯಾಖ್ಯಾನ-ಚರ್ಚೆಗಳು ನಡೆಯುತ್ತಲೇ ಇವೆ. ಅವು ಬಹುಜನರಿಗೆ ತಿಳಿದೂ ಇವೆ. ಇವೆಲ್ಲದರ ಹೊರತಾಗಿಯೂ ಇದೊಂದು ಭಾಷೆಯಾಗಿಯೇ ನಮಗೆ ಪ್ರಿಯವಾಗುತ್ತದೆ. ಇದು ನಮ್ಮ ಅನುಭವವೂ ಹೌದೆನ್ನುವ ಲಕ್ಷಾಂತರ ಜನರೂ ನಮ್ಮೊಂದಿಗಿದ್ದಾರೆ. ಇಂತಹ ಭಾಷೆಯನ್ನು ಮತ್ತು ಅದರಲ್ಲಿನ ವಿಶೇಷತೆಗಳನ್ನು ಸಾಧ್ಯವಾದಷ್ಟು ಕಲಿಯುವ ಮತ್ತು ಕಲಿಸುವ ಸಂಕಲ್ಪಗೈಯೋಣ.

ಸಂಸ್ಕೃತದ ಶಬ್ದಸಂಪತ್ತಿ ಸಂಧಿಸಮಾಸಾದಿಸೌಕರ್ಯಗಳೇ ಮೊದಲಾದವುಗಳಿಂದ ಸೃಷ್ಟಿಸಬಹುದಾದ ಕಾವ್ಯಚಮತ್ಕಾರಗಳು ಎಣೆಯಿಲ್ಲದ್ದೆಂದು ಹೇಳಿದೆನಷ್ಟೇ ! ಅದಕ್ಕೊಂದು ದೃಷ್ಟಾಂತ ಇಲ್ಲಿದೆ. ಸಮಕಾಲೀನ ಕವಿತಲ್ಲಜರೂ, ರಾಷ್ಟ್ರಪತಿಗಳು ನೀಡುವ ವ್ಯಾಸ ಬಾದರಾಯಣ ಪುರಸ್ಕಾರಕ್ಕೆ ಈ ವರ್ಷ ಪಾತ್ರರೂ ಆಗಿರುವ ಬೆಂಗಳೂರಿನ ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರ ಭಾಷಾಶ್ಲೇಷದ ಶ್ಲೋಕವೊಂದು ಇಂಗ್ಲಿಷ್-ಸಂಸ್ಕೃತಗಳೆರಡರಲ್ಲೂ ಅರ್ಥೈಸಬಹುದಾಗಿದ್ದು ಅತ್ಯಂತ ವಿಶಿಷ್ಟವೆನಿಸಿದೆ. ಆ ಶ್ಲೋಕ –
ಗೋವಿಂದ ವಾರ್ದವೇ ಯೂನೋ
ಮೈತ್ರೀ ಸಂಸಾರವೇಶಿಕಾ |
ರಮಾಸರೋಬಾಲಾರ್ಕೋಽಸಿ
ಹರೀಶೋಽಸೂನವೇಟ್ ದರಮ್ ||
ಇದನ್ನು ಗಟ್ಟಿಯಾಗಿ ಉಚ್ಚರಿಸಿದರೆ ಆಂಗ್ಲಭಾಷಾವಾಕ್ಯಗಳೂ ವ್ಯಕ್ತವಾಗುತ್ತವೆ.
ಗೋವಿಂದ ವಾರ್ದವೇ ಯೂನೋ – Go! Win the war the way you know.
ಮೈತ್ರೀ ಸಂಸಾರವೇಶಿಕಾ – My three sons are away shikar.
ರಮಾಸರೋಬಾಲಾರ್ಕೋಽಸಿ – Amass a robe, all are cosy. 
ಹರೀಶೋಽಸೂನವೇಟ್ ದರಮ್ – Hurry! Show soon! Await the rum.
ಕೃಷ್ಣಸ್ತುತಿರೂಪವಾದ ಈ ಶ್ಲೋಕದ ಅರ್ಥವೂ ರಮಣೀಯವಾಗಿರುವುದು ಇನ್ನೊಂದು ವಿಶೇಷ. (ಈ ರೀತಿಯ ಚಿತ್ರಕಾವ್ಯಗಳಲ್ಲಿ ಹಲವೆಡೆ ಅನ್ವಯ-ಅರ್ಥಾವಬೋಧಗಳಿಗೆ ದ್ರಾವಿಡಪ್ರಾಣಾಯಾಮ ಮಾಡಬೇಕಾದ ಸ್ಥಿತಿಯೂ ಇರುತ್ತದೆ.) ಉಭಯಭಾಷಾಪ್ರಾಗಲ್ಭ್ಯವಿರುವ ಕವಿಗಷ್ಟೇ ಇಂತಹ ಸಿದ್ಧಿ ಸಾಧ್ಯವಾಗುವುದೆಂಬ ಅಂಶ ಒಂದೆಡೆಯಾದರೆ, ಇದಕ್ಕಾಧಾರವಾಗಿರುವುದು ಸಂಸ್ಕೃತದ ಶ್ರೀಮಂತಿಕೆಯೆಂಬ ತಥ್ಯವೂ ಮನನೀಯ.