Thursday 9 February 2017

ಒಂದು ಗೀತೆ

ಪರರ ದೋಷಗಳನ್ನೆ ಪರಿಕಿಸುವೆಯೇಕಯ್ಯ
ವಿರತದೋಷನೆ ನೀನು ಭರಿತಸದ್ಗುಣನೇ ||

ರಾಕೇಶಬಿಂಬದೊಳು ಕಾಲುಷ್ಯದಾ ಕಂತೆ
ನಾಕೇಶಕಾಯದೊಳು ಕಣ್ಣುಗಳದೇ ಸಂತೆ |
ವೈಕರ್ತನನು ಸುಡುವ ತೀಕ್ಷ್ಣಕರಗಳ ಗಣದಿ
ಲೋಕದೊಳು ಪಿರಿಯರುಂ ದೋಷವಂತರೆ ದಿಟದಿ ||

ಪೊಡವಿಯೊಳಿಹವು ಗರ್ತಗಿರಿಗುಹಾದಿಗಳೆಲ್ಲ
ಕಡಲಿನೊಳೆ ಪುಟ್ಟಿಹವು ಸುಧೆ ಗರಳ ಸುರೆಯೆಲ್ಲ |
ಪುಡುಕಲೆಲ್ಲೆಡೆ ದೊರಕದುತ್ತರವು ವಿಷಮತೆಗೆ
ಬಿಡು ನೀನಿದರ ಚಿಂತೆಯರಿತೊಗ್ಗು ಸಹಜತೆಗೆ ||

ಸುಳಿದಿರಲು ಸರ್ವರೊಳು ಬಗೆಬಗೆಯ ದೋಷಗಳು
ಹಳಿಯುತಿಹೆಯೇತಕೀ ನೈಸರ್ಗನಿಯಮದೊಳು |
ನಳಿನಾಕ್ಷನೊರ್ವನೇ ನಿರ್ದೋಷಿಯೀ ಜಗದಿ
ತೊಳೆಯೆ ತನ್ನಯ ಕೊಳೆಯ ಬದುಕು ಸಾರ್ಥಕ ಋತದಿ ||

ಹಿಂದೆ ರಚಿಸಿದ್ದ ಪದ್ಯವಿದು. ಹಿಂದೋಳದಲ್ಲಿ ಗುನುಗುನಿಸುತ್ತಾ ರಚಿಸಿದ್ದೆ. ಇಂದು ಕೃಷ್ಣಾರ್ಪಣ.

ದುರ್ಯೋಧನಾಂತರಂಗಮ್

ರಣಾಂಗಣದಿಂದ ಪಲಾಯನಗೈಯುತ್ತಿರುವ ದುರ್ಯೋಧನನ ವರ್ಣನೆ.
ಹಿಂದೊಮ್ಮೆ ರಚಿಸಿ, ಪದ್ಯಪಾನವೆಂಬ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದ ಪದ್ಯಗಳಿವು.
ಮೊದಲ ನಾಲ್ಕು ಪದ್ಯಗಳು ಮತ್ತೇಭವಿಕ್ರೀಡಿತ, ಐದನೆಯದ್ದು ಮಹಾಸ್ರಗ್ಧರಾ ಮತ್ತು
ಆರನೆಯದ್ದು ಕಂದ.

ಫಡ ! ಕುನ್ನೀ ! ರಣಹೇಡಿ ! ನಿಲ್ಲೆನುತೆ ರೌದ್ರಾವೇಶಘೋಷಂಗಳಿಂ
ಗುಡುಗುತ್ತುಂ ಪವನಾತ್ಮಜಂ ಬಿಡದೆ ಬೆನ್ನಟ್ಟಲ್ಕೆ ಕಾಡ್ಗಿಚ್ಚವೋಲ್ |
ನಡುಗುತ್ತುಂ ಪೊಣರಲ್ಕಸಾಧ್ಯಮೆನುತುಂ ದುರ್ಯೋಧನಂ ನೋಂತು ಮೇಣ್
ನಡೆದಂ ವೇಗದಿನೈಂದ್ರದಿಕ್ಕಿನೆಡೆಗಂ ಸಂಭೀತಿಶೋಕಾಕುಲಮ್ ||೧||

ಘನಸಿಂಹಾಸನಮೇಂ ? ಸರತ್ನಪಥಮೇಂ ? ಪೊಂದೇರ್ಗಳೇಂ ? ಅಂಗನಾ-
ಗಣಗಾನಾದಿಗಳೇಂ ? ಪೊಗಳ್ವ ಭಟರೇಂ ? ವೈನೋದಮೇಂ ? ಮೋದಮೇಂ ?
ಇನಿತುಂ ವೈಭವಶಾಲಿಯೀಗಳಸುಗೆಟ್ಟೇಕಾಂಗಿಯಾಗಿರ್ಪೆನೆಂ-
ದೆನುತುಂ ಕಂಬನಿದುಂಬಿ ತಾಂ ಜರುಗಿದಂ ಸಂಭ್ರಾಂತಸರ್ಪಧ್ವಜಂ ||೨||

ಕೊಳೆಯುತ್ತಿರ್ಪ ಕಳೇವರಾಳಿ ಧರಣೀದೌರ್ಭಾಗ್ಯಸಂಕೇತಮೇಂ ?
ಕಳಿವಣ್ ಮಾಮಕಪಾಪಪಾದಪದಿದೆಂದೆನ್ನುತ್ತೆ ಗೋಳಾಡಿದಂ |
ಹಳಿದಂ ದುರ್ವಿಧಿಯಂ ಮನಕ್ಕೆ ಮುಳಿದಂ ಹಮ್ಮೈಸಿ ಬೀಳುತ್ತೆ ಕ-
ಟ್ಟಳಲಿಂದಂ ಪುಯಿಲಿಟ್ಟು ಬಾನ್ ಬಿರಿಯೆ ಮೇಣ್ ಒರ್ವೊರ್ವರಂ ಕಾಣುತುಂ ||೩||

ಅರರೇ ! ಕರ್ಣ ! ಸುಹೃದ್ಯ ! ನಿನ್ನ ಬಲಿಗೊಟ್ಟೆಂ ಸ್ವಾರ್ಥಕಂ, ಹಾ ! ಸಹೋ-
ದರ ದುಃಶಾಸನ ! ಮೀರುತುಂ ಸರದಿಯಂ ನೀಂ ಮುನ್ನಮೇ ಪೋದೆಯೇಂ ?
ತರಳಾ ! ಘಾತಕನಾದೆನಾಂ ಪಿತನುಮೆಂದಾ ಕಾಯಮಂ ಗೊಂಡು ತ-
ನ್ನುರಕೊತ್ತುತ್ತೆ ಪಲುಂಬಿದಂ ಮಗುಳೆಯೇಳ್ದಂ ರೋಷರಕ್ತೇಕ್ಷಣಂ ||೪||

ಪುಸಿಯಲ್ತೆನ್ನ ಪ್ರತಾಪಂ ವಿಧುತವಿತತವಿಶ್ವಂಭರಾಧೀರಸತ್ತ್ವಂ
ಮಿಸುಗುತ್ತಿರ್ಪಾ ಪೃಥಾಪುತ್ರರ ತಲೆಗಡಿವೆಂ ಮತ್ತೆ ವಾತಾತ್ಮಜೀಯಂ |
ಬಸಿರಂ ಬಿಚ್ಚಿ ದ್ರುತಂ ನೂರ್ವರುಮನನುಜರಂ ಪಿಂದೆಗೊಂಡೆನ್ನ ಸೇಡಂ
ಪೊಸೆವೆಂ ನಾನೆನ್ನುತಾಗಳ್ ಘುಡುಘುಡಿಸಿದನಾ ಭೈರವಂ ಧಾರ್ತರಾಷ್ಟ್ರಂ ||೫||

ಭೂಪಂ ಪರಿಪರಿಯಿಂತು ವಿ-
ಲಾಪಿಸುತುಂ ಪೋರೆ ಕಾಯ್ವೆನಾಂ ಕಾಲಮನೆಂ-
ದಾ ಪರ್ಯಂತಂ ಕಾಯಲ್
ದ್ವೈಪಾಯನನಾಮಸರಸಿಯೆಡೆಗಂ ನಡೆದಂ ||೬||

ಕೃಷ್ಣಮಠಕ್ಕೆ ಮುತ್ತಿಗೆಯಂತೆ !

ಎಲ್ಲೆಲ್ಲಿಂದಲೂ ವಿದ್ಯಾರ್ಜನೆಗಾಗಿ ಸಾವಿರಾರು ಜನರು ಬಂದು ಸೇರುವ ತಾಣ ಉಡುಪಿ. ಇಲ್ಲಿಗೆ ಬಂದವರಿಗೆ ಅಶನ-ವಸತಿಗಳ ಚಿಂತೆಯಿಲ್ಲ. ಕಾರಣ ಇಲ್ಲಿರುವ ಕೃಷ್ಣಮಠ ಮತ್ತು ಅಷ್ಟಮಠಗಳು. ಇಲ್ಲಿಂದ ಹಲವು ಶಾಲೆಗಳಿಗೆ ನಿತ್ಯವೂ ಮಧ್ಯಾಹ್ನಭೋಜನವನ್ನು ಕಳುಹಿಸಿ ಕೊಡಲಾಗುತ್ತಿದ್ದು ದಿನಕ್ಕೆ 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಣ್ಣುತ್ತಿದ್ದಾರೆ. ಜಿಜ್ಞಾಸುಗಳಿಗಿಲ್ಲಿ ನಿತ್ಯವೂ ಪ್ರವಚನ ತಾಳಮದ್ದಲೆಗಳೇ ಮೊದಲಾದ ಉತ್ಕೃಷ್ಟ ಕಾರ್ಯಕ್ರಮಗಳಿವೆ. ಇಲ್ಲಿನ ವೇದಿಕೆಯಲ್ಲಿ ಪ್ರದರ್ಶನಗೊಳ್ಳದ ಕಲೆಯಿಲ್ಲ. ಇಲ್ಲಿನ ಶ್ರೀಗಳಿಂದ ಸಮ್ಮಾನಕ್ಕೆ ಪಾತ್ರನಾಗದ ಸತ್ಕಲಾವಿದನಿಲ್ಲ. ವಿದ್ಯಾರ್ಥಿಗಳಿಗೆ ಉದಯೋನ್ಮುಖ ಕಲಾವಿದರಿಗೆ ಇಲ್ಲಿ ವೇದಿಕೆ ಇದ್ದೇ ಇದೆ. ಇಲ್ಲಿನ ವೇದಿಕೆಯಲ್ಲಿ ತನ್ನ ಕಲಾಸೇವೆ ನಡೆಸುವುದು ಪ್ರತಿಯೊಬ್ಬ ಕಲಾವಿದನ ಕನಸಾಗಿರುತ್ತದೆ.
ಹುಲಿವೇಷವೇ ಮೊದಲಾದ ಜಾನಪದ ಕಲಾಕ್ರೀಡೆಗಳಿಗೂ ಇಲ್ಲಿ ಸಿಗುವ ಗೌರವಾದರಗಳು ಮತ್ತೆಲ್ಲೂ ಸಿಗವು. ಪರಿಸರಪ್ರಜ್ಞೆಯ, ವ್ಯಸನಗಳಿಂದ ದೂರವಾಗಿಸುವ - ಹೀಗೆ ನಾನಾವಿಧವಾದ ಹತ್ತುಹಲವು ಕಾರ್ಯಗಳು ಇಲ್ಲಿ ನಿರಂತರ. ಹೀಗೆ ಉಡುಪಿಗೆ ಬಂದು ತಮ್ಮ ಬಾಳನ್ನು ಕಟ್ಟಿಕೊಂಡವರ ಸಂಖ್ಯೆ ಲೆಕ್ಕಕ್ಕೆ ಸಿಗದಿರುವಂಥದ್ದು.

ಇಲ್ಲೆಲ್ಲೂ ಜಾತಿಯ ಪ್ರಶ್ನೆ ಬಂದಿಲ್ಲ. ಯಾರಲ್ಲೂ ಜಾತಿಯನ್ನು ಕೇಳುವುದೂ ಇಲ್ಲ. ದಲಿತರಿಗಾಗಿಯೇ ಹಾಸ್ಟೆಲ್ ಕಟ್ಟಿಸಿದ ಕೀರ್ತಿ ಪೇಜಾವರಶ್ರೀಗಳದ್ದು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದಲಿತರ ಕೇರಿಗಳಲ್ಲಿ ಅವರು ಮಾಡಿರುವ ಮಾಡುತ್ತಿರುವ ಸತ್ಕಾರ್ಯಗಳು ಸರ್ವವಿದಿತ. ಅನಂತಮೂರ್ತಿಯಂಥವರನ್ನೂ ಕರೆದು ಸಮ್ಮಾನಿಸಿರುವ ಇವರ ಸಹಿಷ್ಣುತೆಗೆ ಸಾತ್ತ್ವಿಕತೆಗೆ ಸಾಟಿಯಿಲ್ಲ.

ಹೀಗೆ, ಉಡುಪಿಯು ಮಹಾವಿದ್ಯಾಕೇಂದ್ರವಾಗಿ, ಸಾಂಸ್ಕೃತಿಕಸ್ಥಾನವಾಗಿ, ಕಲಾರಾಜಧಾನಿಯಾಗಿ ಬೆಳಗುತ್ತಿರುವಲ್ಲಿ ಶ್ರೀಕೃಷ್ಣಮಠದ ಪಾತ್ರ ವಿಶಿಷ್ಟವಾದದ್ದು. ಇದೆಲ್ಲವನ್ನೂ ಮಾಡಲೇಬೇಕೆಂದೇನೂ ನಿಯಮವಿಲ್ಲ. ರಾಜಾಜ್ಞೆಯೂ ಇಲ್ಲ. ಕಾಟಾಚಾರಕ್ಕಾಗಿ ನಡೆಸುವ ಕಾರ್ಯಕ್ರಮಗಳೂ ಇವಲ್ಲ. ಎಲ್ಲವೂ ಇಲ್ಲಿನ ಮಠಾಧೀಶರುಗಳ ಉದಾತ್ತಭಾವದಿಂದ ಹೊಮ್ಮಿರುವವುಗಳು.

ಇಂತಹ ನೂರಾರು ಸದ್ವಿಷಯಗಳು ಮುತ್ತಿಗೆ ಹಾಕಲು ಹೊರಟಿರುವವರಿಗೆ ಕಾಣುವುದಿಲ್ಲ. ಕೇವಲ ಮುತ್ತಿಗೆ ಹೋರಾಟ ಎತ್ತಿಕಟ್ಟುವ ಕೆಲಸ ಇತ್ಯಾದಿಗಳೇ ಇವರ ನಿತ್ಯಜಪವೇ ಹೊರತು, ಹಿಂದೆ ಹೇಳಿದ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡಿದ ಉದಾಹರಣೆ ಇವರ ಇತಿಹಾಸದಲ್ಲಿ ಕಾಣಸಿಗದು. ಇವುಗಳ ಬಗ್ಗೆ ಒಮ್ಮೆಯೂ ಒಂದು ಮಾತೂ ಇವರ ಮುಖಪಂಕಜದಿಂದ ಉದುರಿಲ್ಲ.

ಅಶಕ್ತೋಹಂ ಗೃಹಾರಂಭೇ ಶಕ್ತೋಹಂ ಗೃಹಭಂಜನೇ (ಮನೆ ಕಟ್ಟಲು ನಾನು ಅಸಮರ್ಥ, ಮನೆ ಮುರಿಯಲು ಸರ್ವಸಮರ್ಥ) - ಎಂಬ ಮಾತಿಗೆ ಒಳ್ಳೆಯ ಉದಾಹರಣೆ. ಇಂಥವರಿಂದ ಸಮಾಜಕ್ಕೆ ಹಾನಿಯೇ ಹೊರತು ಎಳ್ಳಷ್ಟೂ ಒಳಿತಿಲ್ಲ. ಹೋಗಲಿ, ಇವರಿಗಾದರೂ ಆಗುವ ಲಾಭ ಏನು ? ಎರಡು ಸೌಟು ಗಂಜಿ ಹೆಚ್ಚು ಸಿಕ್ಕೀತು, ಆತ್ಮೋನ್ನತಿ ಖಂಡಿತಾ ಆಗಲಾರದು.

ಮುದವಿತ್ತ ಛಂದಃಸಂವಾದ

ಮೊನ್ನೆ ಫೇಸ್ ಬುಕ್ಕಿನಲ್ಲಿ Ganesh Bhat Koppalatotaರೊಂದಿಗೆ ನಡೆದ ಛಂದಃಸಂವಾದ.

ಅವರ wall ನಲ್ಲಿದ್ದ ಪ್ರಶ್ನೆ -

Where did we first meet??
Copy on ur wall and see who remembers❤

ನೀವು ಮೊದಲು ಎಲ್ಲಿ ನನ್ನ ಭೆಟ್ಟಿಯಾದದ್ದು?

ನನ್ನುತ್ತರ -

ಸ್ತನಮನೆ ಸಮಸ್ಯೆಯಾಗಿಸಿ
ಬಿನದಮನಿತ್ತಾ ಶತಾವಧಾನದೆ ನಿಮ್ಮಾ-
ನನಸರಸೀರುಹಮಂ ನಾಂ
ವನಜಾಕ್ಷಾಸೀಮಕರುಣೆಯಿಂದಂ ಕಂಡೆಂ 😃

ಅವರ ಪ್ರತಿಕ್ರಿಯೆ -

ಅಮಮ! ಸಮಸ್ಯಾವಾಕ್ಯದೆ
ನಿಮಗೆಮ್ಮೀ ಮುಖಮನನ್ವಯಿಸುವೀ ಪರಿಯೇಂ!?
ಕ್ರಮದಿಂ ದತ್ತಪದಂಗಳ-
ನೆ ಮಿಗಲ್ಕಾಂ ನಿಮ್ಮ ಪೆಸರಿಗಂ ಜೋಡಿಸುವೆಂ ;-)

ನನ್ನದ್ದು -

ಅಯ್ಯಯ್ಯೋ ! ವಿಕಟಭಟನ
ಕಯ್ಯೊಳೆ ಬೆತ್ತಮನಿಡುತ್ತೆ ಪೊಡೆಯಿಸಿಕೊಂಡಾ-
ವಯ್ಯನ ಬೆತೆಯಾದುದು ನಿಡು-
ಸುಯ್ಯುವುದಿಂದನ್ಯಮಾರ್ಗಮಂ ಕಾಣೆಂ ನಾಂ :-( 😃

ಅವ್ರದ್ದು -

ಅದರಿಂ ಮೊದಲೇ ಕಂಡೆಂ
ಮುದಮೀಯುವ ನಿಮ್ಮನಲ್ಲಿ ಗುಡಿಯಿದಿರೊಳಗಾಂ
ಪದಪಿಂ ಮೆರವಣಿಗೆಗೆನು-
ತ್ತೊದವಿದ ಪೃಚ್ಛಕರ ಗಡಣದೊಳಗಂದಲ್ತೇ!

ಉಪಸಂಹಾರ -

ನಾನಾಮಹನೀಯರ್ಕಳ-
ನಾನೀಕ್ಷಿಸಿದಾ ದಿನಂ ಸುವರ್ಣವಿಲೇಖ್ಯಂ !
ತಾನಚ್ಚಳಿಯದೆ ಮಂಜುಳ-
ಗಾನದವೋಲಿರ್ಪುದೆನ್ನ ಮಾನಸಮಹಿಯೊಳ್ :-)

ನಮ್ಮ ಹೆಮ್ಮೆಯ ಪ್ರಧಾನಿ

ಎರಡೆರಡು ಸರ್ಜಿಕಲ್ ಸ್ಟ್ರೈಕ್ ಗಳನ್ನು ಯಶಸ್ವಿಯಾಗಿ ನಡೆಸಿ ಅಪಾರ ಜನಪ್ರಿಯತೆಯನ್ನು ಪಡೆದ ನರೇಂದ್ರ ಮೋದಿಯವರನ್ನು ಕಂಡಾಗಲೆಲ್ಲ ಕಾಳಿದಾಸನ ಈ ಶ್ಲೋಕ ನೆನಪಾಗುತ್ತದೆ -

तस्य संवृतमन्त्रस्य गूढाकारेङ्गितस्य च ।
फलानुमेयाः प्रारम्भाः संस्काराः प्राक्तना इव ॥

ಇದು ದಿಲೀಪನನ್ನು ಬಣ್ಣಿಸುವ ಶ್ಲೋಕ.

ಅರ್ಥ - ತನ್ನ ರಹಸ್ಯಸಮಾಲೋಚನೆಗಳನ್ನಾಗಲಿ ಇಂಗಿತಗಳನ್ನಾಗಲಿ ಎಲ್ಲೂ ಬಿಚ್ಚಿಡದ ಆತನ ಉಪಕ್ರಮಗಳು ಫಲಪ್ರಾಪ್ತಿಯಿಂದಲೇ ಊಹಿಸಲ್ಪಡುವಂಥಾಗಿದ್ದವು.

ಇದು ಉತ್ತಮ ಅಧಿಕಾರಿಯ ಲಕ್ಷಣ. ಯಾವುದೇ ಮಹಾಕಾರ್ಯವನ್ನು ಸಾಕಾರಗೊಳಿಸುವುದಕ್ಕೆ ಅನೇಕ ಚಿಂತನೆಗಳು ಸಮಾಲೋಚನೆಗಳು ಕ್ರಿಯಾನ್ವಯನಗಳು ಬೇಕಾಗುತ್ತವೆ. ಇವು ಸ್ವಲ್ಪ ಪ್ರಕಟಗೊಂಡರೂ ವಿಘ್ನಸಂಭವ ನಿಶ್ಚಿತ. ಅಪೇಕ್ಷಿತ ಫಲವೂ ಅಸಾಧ್ಯ. ಆದ್ದರಿಂದಲೇ "ಷಟ್ಕರ್ಣೋ ಭಿದ್ಯತೇ ಮಂತ್ರಃ" ಎಂಬ ನೀತಿ ಪ್ರಸಿದ್ಧವಾಗಿರುವುದು.

ಈ ಹಿನ್ನೆಲೆಯಲ್ಲಿ ಕಂಡಾಗ ಮೋದಿಯವರ ಮುತ್ಸದ್ಧಿತನವೂ, "ಮೊದಲೇ ಹೇಳಬೇಕಿತ್ತು, ಕಾಲಾವಕಾಶ ಕೊಡಬೇಕಿತ್ತು " - ಎಂದೆಲ್ಲಾ ಹೇಳುವವರ ಬಾಲಿಶತನವೂ ಏಕಕಾಲದಲ್ಲಿ ಸುವೇದ್ಯವಾಗುತ್ತದೆ.

ಅವರನ್ನು ಕಾಣುತ್ತಿರುವಾಗಲೆಲ್ಲ, ನನ್ನ ದೇಶವನ್ನು ಮುನ್ನಡೆಸಲು ಆ ತಲೆಯಲ್ಲಿ ಇನ್ನಾವ ಯೋಜನೆಗಳು ರೂಪುಗೊಂಡಿವೆಯೋ ಎಂಬ ಸಾನಂದ ಕೌತೂಹಲವೂ ಮೂಡುತ್ತಿರುತ್ತದೆ :-)

ಶ್ರೀಯುತ ಕಡವ ಶಂಭು ಶರ್ಮರ ಭಗವದ್ಗೀತೆಯ ಕನ್ನಡಾನುವಾದ

ಶ್ರೀಯುತ ಕಡವ ಶಂಭು ಶರ್ಮರ ಭಗವದ್ಗೀತೆಯ ಕನ್ನಡಾನುವಾದ

ಪ್ರಪಂಚದ ನಾನಾಭಾಷೆಗಳಲ್ಲಿ ಗೀತೆಯ ಅನುವಾದ ಸಾರಸಂಗ್ರಹ ಇತ್ಯಾದಿ ರೂಪವಾಗಿ ಬಂದಿರುವ ಗ್ರಂಥಗಳ ಸಂಖ್ಯೆ ಲೆಖ್ಖವಿಡಲಾಗದಷ್ಟು. ಕನ್ನಡದಲ್ಲಿಯೂ ಗೀತೆಯ ಕುರಿತಾದ ಪುಸ್ತಕಗಳು ಬಹುಸಂಖ್ಯಾಕ. ಹಲವರು ಗದ್ಯಾನುವಾದವನ್ನೋ ವಿಸ್ತೃತವಿವರಣೆಗಳನ್ನೋ ವಿಶಿಷ್ಟದೃಷ್ಟಿಯ ವಿಮರ್ಶೆಗಳನ್ನೋ ನೀಡಿದರೆ, ಇನ್ನು ಕೆಲವರು ಪದ್ಯಾನುವಾದಗಳನ್ನೇ ಮಾಡಿದವರಿದ್ದಾರೆ. ಕನ್ನಡಕವಿಶ್ರೇಷ್ಠರಾದ ಪಂಪ-ಕುಮಾರವ್ಯಾಸರು ಪ್ರಾಸಂಗಿಕವಾಗಿ ಗೀತೆಯನ್ನು ನಿರೂಪಿಸಿದರೆ, ನಾಗರಸಕವಿಯು ಭಾಮಿನೀಷಟ್ಪದಿಯಲ್ಲಿ, ಶಿವಾನಂದಸ್ವಾಮಿಯವರು ಮತ್ತು ಎ. ಜಿ. ಕೃಷ್ಣರಾಯರು ವಾರ್ಧಕಷಟ್ಪದಿಯಲ್ಲಿ, ಪೆರುಮುಂಡ ಗಣಪತಿ ಭಟ್ಟರು ಭಾಮಿನೀಷಟ್ಪದಿಯಲ್ಲಿ ಮತ್ತು ವಿಜಯನಾಥಭಟ್ಟರು ಚೌಪದಿಯಲ್ಲಿ - ಹೀಗೆ ನಾನಾಕವಿಗಳು ಪತಿಪದ್ಯವನ್ನೂ ಸೊಗಸಾಗಿ ಅನುವಾದಿಸಿದ್ದಾರೆ. ಈ ಅನುವಾದಕರಲ್ಲಿ ಕಡವ ಶಂಭು ಶರ್ಮರೂ ಓರ್ವರು. ಅವರು ಮೂಲದ ಅನುಷ್ಟುಪ್ ಛಂದಸ್ಸಿನಲ್ಲಿಯೇ ಅನುವಾದಿಸಿರುವುದು ವಿಶೇಷ. ಡಾ. ಶ್ರೀಧರ ಹೆಚ್. ಜಿ. ಯವರು ಸಂಪಾದಿಸಿ, ಪುತ್ತೂರಿನ ಕಡವ ಶಂಭು ಶರ್ಮ ಪ್ರತಿಷ್ಠಾನದಿಂದ ಪ್ರಕಾಶಿತವಾಗಿರುವ ಈ ಅನುವಾದದ ಕೆಲವು ಪದ್ಯಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಮನಸ್ಸಾದುದರಿಂದ ಈ ಪ್ರವೃತ್ತಿ.

ಪ್ರಥಮ ಶ್ಲೋಕ –
ಧರ್ಮಕ್ಷೇತ್ರೇ ಕುರುಕ್ಷೇತ್ರೇ ...

ಅನುವಾದ –
ಅರದಿರ್ಕೆ ಕುರುಕ್ಷೇತ್ರಂ ಅಲ್ಲಿ ಪೋರಲ್ಕೆ ಸೇರ್ದವರ್ |
ಪಾಂಡುಪುತ್ರರ್ ನನ್ನವರುಂ ಏಂ ಮಾಡಿದರೊ ಸಂಜಯ ||

ಇಲ್ಲಿ ಮೂಲದ ಧರ್ಮಕ್ಷೇತ್ರ ಅರದಿರ್ಕೆ ಎಂದಾಗಿದೆ. ಸಮವೇತಾ ಯುಯುತ್ಸವಃ - ಪೋರಲ್ಕೆ ಸೇರ್ದವರ್. ಹೀಗೆ ಮೂಲಚ್ಛಂದಸ್ಸಿನ ಸೊಗಸಿನಲ್ಲಿಯೇ ಅಚ್ಚಗನ್ನಡದ ಪದಗಳಿಂದ ಈ ಶ್ಲೋಕ ಮೂಡಿದೆ.

ಗಾಂಡೀವಂ ಸ್ರಂಸತೇ ಹಸ್ತಾತ್ ...

ಕಯ್ಯಿಂ ಬೀಳ್ವುದು ಗಾಂಡೀವಂ ತೊವಲುಂ ಪೊತ್ತುತಿರ್ಪುದು |
ಸುತ್ತುವಂತೆನ್ನ ಬಗೆಯುಂ ನಿಲಲಾರ್ತನುಮಿಲ್ಲ ನಾಂ ||

ಇನ್ನು ಅತ್ಯಂತ ಪ್ರಸಿದ್ಧ ಯದಾ ಯದಾ ಹಿ ಧರ್ಮಸ್ಯ ಶ್ಲೋಕ ಶರ್ಮರ ಮುಖದಲ್ಲಿ ಇಂತು ಮೂಡಿದೆ –
ಎಂದೆಂದಾದಪುದೋ ಪಾರ್ಥ ಸಲೆ ಧರ್ಮಕ್ಕೆ ಬಾಡಿಕೆ |
ಅಧರ್ಮಕ್ಕೇಳ್ಗೆಯಾದಾಗಳ್ ತನ್ನಂ ಪುಟ್ಟಿಸಿಕೊಂಬೆನಾಂ ||

ಕೊನೆಯದಾಗಿ, ನನಗೆ ಅತ್ಯಂತ ಪ್ರಿಯವಾದ “ಆಪೂರ್ಯಮಾಣಮಚಲಪ್ರತಿಷ್ಠಂ” ಎಂಬ ದ್ವಿತೀಯಾಧ್ಯಾಯದ ೭೦ನೇ ಶ್ಲೋಕದ ಅನುವಾದ –
ತುಂಬುತ್ತಿರ್ಪಲ್ಲಾಡದೂರ್ದಿರ್ಕೆಯುಳ್ಳ
ಮುನ್ನೀರಂ ನೀರ್ ಪುಗುವಂತೆಲ್ಲ ಕಾಮಂ |
ಆರಂ ಕಾಮಂ ಪುಗುಗುಂ ಶಾಂತಿಯಂ ತಾಂ
ಸೇರ್ಗುಂ ಕಾಮಕ್ಕಾಟಿಪಂ ಪೊರ್ದಲಾರಂ ||

ಈ ಎಲ್ಲಾ ಪದ್ಯಗಳಲ್ಲಿಯೂ ಕನ್ನಡದ ಸೊಗಸು ತಾನಾಗಿಯೇ ನೆಲೆ ನಿಂತಂತಿದೆ. ಸಮುಚಿತಪದವಿನ್ಯಾಸಗಳಿಂದ ಪ್ರತಿಪದ್ಯವೂ ಶಿಲ್ಪವಾಗಿ ಮೂಡಿದೆ.
ಇಂತಹ ಅನುವಾದವನ್ನಿತ್ತ ಶರ್ಮರಿಗೆ ಈ ಗೀತಾಜಯಂತಿಯ ಸುಸಮಯದಲ್ಲಿ ನಮನಗಳು.

ಎಲ್ಲರಿಗೂ ಗೀತಾಜಯಂತಿಯ ಶುಭಾಶಯಗಳು :-)