Wednesday 29 March 2017

ಹೇಮಲಂಬೋ ವಿಲಂಬಶ್ಚ

ಕಳೆದ ದುರ್ಮುಖಸಂವತ್ಸರದ ಹೆಸರಿನ ಕುರಿತು (ದುರ್ಮುಖವೋ ದುರ್ಮುಖಿಯೋ ಎಂದು) ಒಂದಷ್ಟು ಗೊಂದಲಗಳಿದ್ದಿದ್ದು ನಿಮಗೆ ನೆನಪಿರಬಹುದು. ಈ ನಾಮಜಿಜ್ಞಾಸೆ ಈ ವರ್ಷಕ್ಕೂ ಅನುವೃತ್ತವಾಗಿದೆ. ಇಲ್ಲಿಯಂತೂ ಹೇವಿಲಂಬಿ, ಹೇಮಲಂಬಿ ಮತ್ತು ಹೇಮಲಂಬ ಎಂಬ ಮೂರು ಹೆಸರುಗಳು ಚಾಲ್ತಿಯಲ್ಲಿದ್ದು, ಒಂದೊಂದು ಪಂಚಾಂಗದಲ್ಲಿ ಒಂದೊಂದು ಹೆಸರು ನಮೂದಿಸಲ್ಪಟ್ಟಿರುವುದರಿಂದ ಯಾವುದು ಸರಿ? ಯಾವುದು ತಪ್ಪು? ಎಂಬ ಚರ್ಚೆ ಅಲ್ಲಲ್ಲಿ ನಡೆಯುತ್ತಿದೆ. ಇದು ಆವಶ್ಯಕವೂ ಹೌದು. ಏಕೆಂದರೆ ’ಏಕಃ ಶಬ್ದಃ ಸಮ್ಯಗ್ ಜ್ಞಾತಃ ಸುಷ್ಠು ಪ್ರಯುಕ್ತಃ ಸ್ವರ್ಗೇ ಲೋಕೇ ಕಾಮಧುಗ್ ಭವತಿ’ (ಒಂದು ಶಬ್ದವನ್ನು ಸರಿಯಾಗಿ ಅರಿತು ಚೆನ್ನಾಗಿ ಪ್ರಯೋಗಿಸಿದರೆ ಅದು ಇಹ-ಪರಗಳಲ್ಲಿ ಇಷ್ಟಾರ್ಥಗಳನ್ನೀಯುತ್ತದೆ) - ಎಂಬ ನಂಬಿಕೆ ನಮ್ಮದು.  ಈ ಹಿನ್ನೆಲೆಯಲ್ಲಿ ಮೂಲಗ್ರಂಥಗಳ ಅಧ್ಯಯನ-ಪರಿಶೀಲನೆಗಳಿಂದ ಕಂಡುಕೊಂಡ ವಿಚಾರಗಳನ್ನು ಜಿಜ್ಞಾಸುಗಳ ಮುಂದಿಡುತ್ತಿದ್ದೇನೆ.

ಪ್ರಾಮಾಣಿಕಪ್ರಯೋಗಗಳ ಪರಿಶೀಲನೆ

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವುದು ಪ್ರಾಚೀನ ಮತ್ತು ಪ್ರಾಮಾಣಿಕ ಗ್ರಂಥಗಳಲ್ಲಿ ಈ ಸಂವತ್ಸರದ ಹೆಸರು ಹೇಗೆ ಉಲ್ಲಿಖಿತವಾಗಿದೆ ಎಂಬುದು. ಏಕೆಂದರೆ ಅಲ್ಲಿ ಯಾವ ರೀತಿಯ ಉಲ್ಲೇಖವಿದೆಯೋ ಅದುವೇ ನಮಗೆ ಸ್ವೀಕಾರಕ್ಕೂ ಅನುಸರಣಕ್ಕೂ ಯೋಗ್ಯ. ಆದ್ದರಿಂದ ಅವುಗಳನ್ನು ಮೊದಲು ಪರಿಶೀಲಿಸೋಣ.

ಗರುಡಪುರಾಣದಲ್ಲಿ ಸಂವತ್ಸರಗಳನ್ನು ಹೆಸರಿಸುತ್ತಾ -
ಹೇಮಲಂಬೋ ವಿಲಂಬಶ್ಚ ವಿಕಾರಃ ಶಾರ್ವರೀ ಪ್ಲವಃ |
- ಎಂದಿದೆ. ಇಲ್ಲಿ ಉಲ್ಲಿಖಿತವಾಗಿರುವುದು ’ಹೇಮಲಂಬ’ಶಬ್ದ. ವೀರಮಿತ್ರೋದಯ, ಸಮಯಮಯೂಖ, ಧರ್ಮಸಿಂಧು, ನಿರ್ಣಯಸಿಂಧು – ಇತ್ಯಾದಿ ಪ್ರಾಮಾಣಿಕಗ್ರಂಥಗಳಲ್ಲಿಯೂ ಇದೇ ಪಾಠ ಕಾಣಸಿಗುತ್ತದೆ.

ಆದರೆ, ಈ ಶ್ಲೋಕದಲ್ಲಿ ಹೇಮಲಂಬೀ ವಿಲಂಬೀ ಚ ಎಂಬ ಪಾಠವೂ ಅಲ್ಲಲ್ಲಿ ಕಾಣಸಿಗುವುದು ವಿಚಾರಣೀಯ ವಿಷಯ. ಈ ಪ್ರಯೋಗವೂ ಹಲವೆಡೆ ಪ್ರಚಲಿತವಾಗಿದ್ದು ಛಂದಸ್ಸಿಗೂ ಒಗ್ಗುವುದರಿಂದ ಯಾವುದು ಶುದ್ಧ ಪಾಠ, ಯಾವುದು ಅಶುದ್ಧ ಅಥವಾ ಎರಡೂ ಶುದ್ಧವೇ – ಎಂಬ ನಿರ್ಣಯ ಸಿಗಲಾರದು. ಅದಕ್ಕಾಗಿ ಬೇರೆ ಉಲ್ಲೇಖಗಳತ್ತ ತೆರಳೋಣ.

ಆಚಾರ್ಯ ವರಾಹಮಿಹಿರರ ಬೃಹತ್ಸಂಹಿತೆಯಲ್ಲಿ -
ಹೇಮಲಂಬ ಇತಿ ಸಪ್ತಮೇ ಯುಗೇ ಸ್ಯಾದ್ ವಿಲಂಬಿ ಪರತೋ ವಿಕಾರಿ ಚ ।
ಎಂದು ಹೇಮಲಂಬ ಶಬ್ದವೇ ಇದೆ.  ಅಲ್ಲದೆ ಇಲ್ಲಿ ಯಾವುದೇ ಪಾಠಭೇದವಿಲ್ಲ.

ಇನ್ನು ಈ ಗ್ರಂಥಗಳಲ್ಲಿ ಸಂವತ್ಸರಫಲಕಥನಪ್ರಕರಣವನ್ನು ನೋಡೋಣ. ಇಲ್ಲೆಲ್ಲಾ ’ಹೇಮಲಂಬೇ’ ಎಂಬ ರೂಪದ ಬಳಕೆಯಿರುವುದು ಗಮನಾರ್ಹ. ಏಕೆಂದರೆ ’ಹೇಮಲಂಬೇ’ ಎಂಬುದು ಹೇಮಲಂಬಶಬ್ದದ ಸಪ್ತಮೀವಿಭಕ್ತ್ಯಂತ ರೂಪ. (ಹೇಮಲಂಬಿಶಬ್ದದ ಸಪ್ತಮೀವಿಭಕ್ತಿಯಲ್ಲಿ ಹೇಮಲಂಬಿನಿ ಎಂದಾಗುತ್ತದೆ.) ಆ ಪ್ರಯೋಗಗಳೂ ಇಲ್ಲಿವೆ -
ಅಗ್ನಿಪುರಾಣದಲ್ಲಿ –
ದುರ್ಮುಖೇ ದುರ್ಮುಖೋ ಲೋಕೋ ಹೇಮಲಂಬೇ ನ ಸಂಪದಃ |
ಭವಿಷ್ಯಪುರಾಣದಲ್ಲಿ -
ಪೀಡ್ಯಂತೇ ಸರ್ವಸಸ್ಯಾನಿ ದೇಶೇ ದೇಶೇ ಶುಚಿಸ್ಮಿತೇ |
ಹೇಮಲಂಬೇ ಪ್ರಜಾಃ ಸರ್ವಾಃ ಕ್ಷೀಯಂತೇ ನಾತ್ರ ಸಂಶಯಃ ||
ಅಂತೆಯೇ ಮಾನಸಾಗರಿಯ ಶ್ಲೋಕ –
ಅದಾತಾ ಕೃಪಣಃ ಪೂಜ್ಯೋ ಹೇಮಲಂಬೇ ನರೋ ಭವೇತ್ ।
- ಹೀಗೆ ಇಲ್ಲೆಲ್ಲಾ ಹೇಮಲಂಬಶಬ್ದವೇ ಉಲ್ಲಿಖಿತವಾಗಿರುವುದನ್ನು ಪರಿಭಾವಿಸಿದಾಗ, ಈ ಶಬ್ದ ಸಾಧು ಎಂಬುದು ಸಿದ್ಧವಾಗುತ್ತದೆ.

ಹಾಗಾದರೆ ಹೇಮಲಂಬಿ ಅಸಾಧುವೇ?

ಮೇಲ್ಕಾಣಿಸಿದ ಪ್ರಯೋಗಗಳಲ್ಲಿ ಹೇಮಲಂಬವೇ ಇರುವುದನ್ನು ಕಂಡಾಗ ’ಹಾಗಾದರೆ ಹೇಮಲಂಬಿಶಬ್ದ ಅಸಾಧುವೇ’ ಎಂಬ ಪ್ರಶ್ನೆ ಬಂದೇ ಬರುತ್ತದೆ. ಆದರೆ, ಈ ಶಬ್ದವೂ ಒಂದೆರಡು ಕಡೆ ಗೋಚರವಾಗುತ್ತದೆ. 
ದೈವಜ್ಞವಿಲಾಸವೆಂಬ ಸಂಗ್ರಹಗ್ರಂಥದಲ್ಲಿ  -
ಹೇಮಲಂಬಿನಿ ಭೂಪಾಲಾಃ ಪರಸ್ಪರವಿರೋಧಿನಃ |
ಪ್ರಜಾಪೀಡಾ ತ್ವನರ್ಘತ್ವಂ ತಥಾಪಿ ಸುಖಿನೋ ಜನಾಃ ||
- ಇಲ್ಲಿರುವ ಹೇಮಲಂಬಿನಿ ಎಂಬ ರೂಪ ಹೇಮಲಂಬಿಶಬ್ದದ್ದು. (ವಸ್ತುತಃ ಹೇಮಲಂಬಿನ್ ಎಂಬ ನಕಾರಾಂತ ಶಬ್ದ.)
ಅಲ್ಲದೆ, ಬೃಹತ್ಪಂಚಾಂಗಫಲಾದರ್ಶವೆಂಬ ಗ್ರಂಥದಲ್ಲಿಯೂ –
ಪರಸ್ಪರಂ ಕ್ಷಿತೀಶ್ವರಾ ವಿರೋಧಿನಃ ಸುಖೀ ಜನಃ |
ಸೃಜಂತಿ ವಾರಿ ಚಾಂಬುದಾಸ್ತ್ವತೀವ ಹೇಮಲಂಬಿನಿ ||
ಎಂದು ಹೇಮಲಂಬಿಶಬ್ದವಿದೆ. (ಇದರಲ್ಲೇ ಮತ್ತೊಂದು ಶ್ಲೋಕದಲ್ಲಿ ಹೇಮಲಂಬಶಬ್ದವೂ ಇದೆ)
ಹೀಗಿರುವಾಗ ಹೇಮಲಂಬಿಶಬ್ದದ ಸಾಧುತ್ವಕ್ಕೂ ಪ್ರಮಾಣ ಸಿಕ್ಕಂತಾಗಿ, ಇದೂ ಸಾಧುವೆಂಬ ಪರಿಗಣನೆಗೆ ಅರ್ಹವಾಗುತ್ತದೆ.

ಹೇವಿಳಂಬಿ?

ಇನ್ನು ಹೇವಿಳಂಬಿಯತ್ತ ಬರೋಣ. ಈ ಶಬ್ದ ಯಾವುದೇ ಪ್ರಾಮಾಣಿಕ ಗ್ರಂಥದಲ್ಲಿ ಕಾಣಸಿಕ್ಕಿಲ್ಲ. ಆದರೂ ಹೇಗೋ ಬಳಕೆಗೆ ಬಂದುಬಿಟ್ಟಿದೆ. ಪ್ರಾಯಃ, ಮುಂದಿರುವ ವಿಲಂಬ/ವಿಲಂಬಿ ಸಂವತ್ಸರದ ಪ್ರಭಾವದಿಂದ ಮೂಲಪಾಠವು ’ಹೇಮಲಂಬೋ ವಿಲಂಬಶ್ಚ’ – ’ಹೇಮಲಂಬೀ ವಿಲಂಬೀ ಚ’ – ’ಹೇವಿಲಂಬೀ ವಿಲಂಬೀ ಚ’ - ಹೀಗೆ ಕಾಲಕ್ರಮೇಣ ಕೆಲವೆಡೆ ಬದಲಾವಣೆಗಳನ್ನು ಪಡೆದುಕೊಂಡಿರಬಹುದು. ಇನ್ನು ನಮ್ಮಲ್ಲಿ ಲಕಾರವು ಳಕಾರವಾಗಿ ಪರಿಣತವಾಗುವುದು ಸರ್ವಸಾಮಾನ್ಯವಾದ್ದರಿಂದ ಹೇವಿಳಂಬಿಯಾಗಿದ್ದಿರಬೇಕು. ಈ ಶಬ್ದಕ್ಕೆ ಸ್ವರಸತಃ ವ್ಯುತ್ಪತ್ತಿಯಾಗಲಿ ಅರ್ಥವಾಗಲಿ ಅಲಭ್ಯವೆಂಬುದೂ ಇಲ್ಲಿ ಪರಿಗಣನೀಯ ವಿಷಯ.
ಆದ್ದರಿಂದ ಸದ್ಯಕ್ಕೆ ಪ್ರಯೋಗಪ್ರಾಮಾಣ್ಯವೂ ಅರ್ಥವತ್ತ್ವವೂ ಕಾಣಸಿಗದಿರುವುದರಿಂದ ಈ ಶಬ್ದವನ್ನು ಕೈಬಿಡುವುದೇ ಲೇಸು.

ಹೇಮಲಂಬ/ಹೇಮಲಂಬಿ

ಈಗಾಗಲೇ ವಿವರಿಸಿದಂತೆ ಇವೆರಡೂ ಸಾಧುಶಬ್ದಗಳು. ಇವೆರಡಕ್ಕೂ ಕ್ರಮವಾಗಿ ’ಹೇಮ ಲಂಬತೇ ಅತ್ರ’ ಮತ್ತು ’ಹೇಮ ಲಂಬಯತಿ’ – ಎಂಬ ವ್ಯುತ್ಪತ್ತಿಗಳಿಂದ ಸಂಪತ್ತು ಕಳೆದುಹೋಗುವ ವರ್ಷ ಎಂಬರ್ಥವೂ ಸರಿ ಹೊಂದುತ್ತದೆ. ಸಂವತ್ಸರಫಲಕಥನಶ್ಲೋಕಗಳಲ್ಲಿ ಮುಖ್ಯವಾಗಿ ಕಾಣುವ ಫಲಗಳಲ್ಲಿ ಇದೂ ಒಂದು.
ಆದರೆ, ಇನ್ನೂ ಸೂಕ್ಷ್ಮವಾಗಿ ವಿವೇಚಿಸಿದರೆ, ಹೇಮಲಂಬಿಶಬ್ದ ಕಾಣಸಿಗುವುದು ಒಂದೆರಡು ಅರ್ವಾಚೀನಗ್ರಂಥಗಳಲ್ಲಿ. ಪ್ರಾಚೀನಗ್ರಂಥಗಳಲ್ಲೆಲ್ಲಾ ಪ್ರಯುಕ್ತವಾಗಿರುವುದು ಹೇಮಲಂಬವೇ. (ಓದುಗರು ಮತ್ತೊಮ್ಮೆ ಈ ಪ್ರಯೋಗಗಳನ್ನು ಪರಿಶೀಲಿಸಬಹುದು.) ಆದ್ದರಿಂದ ಹೇಮಲಂಬವೇ ಹೆಚ್ಚು ಪ್ರಶಸ್ತ ಎಂದೂ ತಿಳಿಯಬಹುದು.

ಹೀಗೆ ಇಲ್ಲಿ ಚರ್ಚಿಸಿರುವ ವಿಷಯಗಳ ಸಾರವನ್ನು ಸಂಗ್ರಹವಾಗಿ ಹೀಗೆ ಹೇಳಬಹುದು –
೧. ಹೇಮಲಂಬ ಮತ್ತು ಹೇಮಲಂಬಿ – ಇವೆರಡು ಸಾಧು ಶಬ್ದಗಳು. ಇವುಗಳಲ್ಲಿಯೂ ಪ್ರಾಚೀನ ಗ್ರಂಥಗಳಲ್ಲೆಲ್ಲಾ ಹೇಮಲಂಬ ಶಬ್ದವಿರುವುದರಿಂದ ಇದು ಹೆಚ್ಚು ಪ್ರಶಸ್ತ.
೨. ಪ್ರಯೋಗಪ್ರಾಮಾಣ್ಯವಿಲ್ಲದಿರುವುದರಿಂದ ಹೇವಿಳಂಬಿಶಬ್ದವನ್ನು ಕೈಬಿಡುವುದೇ ಉತ್ತಮ. ಇದಕ್ಕೆ ಸರಿಯಾದ ಅರ್ಥ-ವ್ಯುತ್ಪತ್ತಿಗಳೂ ಇಲ್ಲ.

(ಮುಂದಿನ ಸಂವತ್ಸರದಲ್ಲಿಯೂ ವಿಲಂಬ ಮತ್ತು ವಿಲಂಬಿ ಎಂಬ ಎರಡು ಹೆಸರುಗಳಿದ್ದು ಮತ್ತೆ ಗೊಂದಲಕ್ಕಾಸ್ಪದವಿದೆ. ಅಲ್ಲಿ ಎರಡೂ ಪ್ರಯೋಗಗಳಿಗೂ ಪ್ರಾಚೀನ ಪ್ರಮಾಣಗಳು ಸಿಗುವುದರಿಂದ ಎರಡು ಹೆಸರುಗಳೂ ಸರಿಯೇ. ಸಮಯ ಬಂದಾಗ ಅದರ ಬಗೆಗೂ ಪ್ರಯೋಗಪರಿಶೀಲನೆಗಳೊಂದಿಗೆ ಚಿಂತಿಸೋಣ.)

ಇದಿಷ್ಟೂ ಹಲವಾರು ಪ್ರಾಮಾಣಿಕ ಗ್ರಂಥಗಳ ಅಧ್ಯಯನದ ಅನಂತರ ಕಂಡುಕೊಂಡ ನಿರ್ಣಯ. ಇದರ ಕುರಿತು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದಿದ್ದು ಪ್ರಯೋಗಪ್ರಾಮಾಣ್ಯಪುರಸ್ಸರವಾದ ಯಾವುದೇ ಅಭಿಪ್ರಾಯಭೇದ ಬಂದಿಲ್ಲ. ಅಂಥದ್ದೇನಾದರೂ ಬಂದಲ್ಲಿ ಮತ್ತೆ ಕಲೆತು ವಿಚಾರ ಮಾಡೋಣ.
ಸದ್ಯಕ್ಕೆ, ಎಲ್ಲಾ ಓದುಗರಿಗೂ ಹೇಮಲಂಬ (ಹೇಮಲಂಬಿ) ಸಂವತ್ಸರದ ಶುಭಾಶಯಗಳು :-)

No comments:

Post a Comment