Tuesday 7 March 2017

ಹೇಮಲಂಬೋ ವಿಲಂಬಶ್ಚ

ಹೇಮಲಂಬೋ ವಿಲಂಬಶ್ಚ

ಈಗಿನ ದುರ್ಮುಖಸಂವತ್ಸರದ ಹೆಸರಿನ ಕುರಿತು (ದುರ್ಮುಖವೋ ದುರ್ಮುಖಿಯೋ ಎಂದು) ಒಂದಷ್ಟು ಗೊಂದಲಗಳಿದ್ದಿದ್ದು ನಿಮಗೆ ನೆನಪಿರಬಹುದು. ಈ ನಾಮಜಿಜ್ಞಾಸೆ ಮುಂದಿನ ವರ್ಷಕ್ಕೂ ಅನುವೃತ್ತವಾಗಿದೆ. ಮುಂದಿನ ಸಂವತ್ಸರಕ್ಕಂತೂ ಹೇವಿಲಂಬಿ, ಹೇಮಲಂಬಿ ಮತ್ತು ಹೇಮಲಂಬ ಎಂಬ ಮೂರು ಹೆಸರುಗಳು ಚಾಲ್ತಿಯಲ್ಲಿದ್ದು ಯಾವುದು ಸರಿ? ಯಾವುದು ತಪ್ಪು? ಎಂಬ ಚರ್ಚೆ ಈಗಾಗಲೇ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಅಧ್ಯಯನ-ಪರಿಶೀಲನೆಗಳೊಂದಿಗೆ ಈ ಬರೆಹಕ್ಕೆ ತೊಡಗಿದ್ದೇನೆ.  

ಇಂತಹ ವಿಷಯಗಳಲ್ಲಿ ಪ್ರಾಮಾಣಿಕ ಗ್ರಂಥಗಳಲ್ಲಿನ ಪ್ರಯೋಗಗಳೇ ನಮಗೆ ದಾರಿದೀವಿಗೆ.  

ಗರುಡಪುರಾಣದಲ್ಲಿ ಸಂವತ್ಸರಗಳನ್ನು ಹೆಸರಿಸುತ್ತಾ -
ಹೇಮಲಂಬೋ ವಿಲಂಬಶ್ಚ ವಿಕಾರಃ ಶಾರ್ವರೀ ಪ್ಲವಃ |

- ಎಂದಿದೆ. ವೀರಮಿತ್ರೋದಯದ ಸಮಯಪ್ರಕಾಶದಲ್ಲಿಯೂ ಇದೇ ತೆರನಾದ ನಾಮೋಲ್ಲೇಖವಿದೆ. ಇದರ ಪ್ರಕಾರ ಹೇಮಲಂಬವೆಂಬುದು ಸರಿಯಾದ ರೂಪ.

ಆದರೆ ಕೆಲವೊಂದು ಲೇಖನಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಈ ಶ್ಲೋಕವನ್ನು ಪ್ರಾಸಂಗಿಕವಾಗಿ ಉದ್ಧರಿಸುವಾಗ “ಹೇಮಲಂಬೀ ವಿಲಂಬೀ ಚ” ಎಂಬ ಪಾಠವೂ ಬಂದುಬಿಟ್ಟಿದೆ. ಇದೂ ಕೂಡಾ ಛಂದಸ್ಸಿಗೆ ಒಗ್ಗುವುದರಿಂದ, ಇದನ್ನೇ ಪ್ರಮಾಣವೆಂದು ಸ್ವೀಕರಿಸಿ ಹೇಮಲಂಬೀ ಎಂಬುದೇ ಸರಿಯಾದ ರೂಪವೆಂದು ಹಲವರು ತೀರ್ಮಾನಿಸಿದ್ದಾರೆ. ಇನ್ನೂ ಕೆಲವೆಡೆ ಇದನ್ನೇ “ಹೇವಿಲಂಬೀ ವಿಲಂಬೀ ಚ” ಎಂದಿರುವುದರಿಂದ ಹೇವಿಲಂಬಿ ಎಂಬ ಮತ್ತೊಂದು ಹೆಸರೂ ಹುಟ್ಟಿಕೊಂಡಿದೆ. ಇವುಗಳಲ್ಲಿ, ಯಾವುದು ಶುದ್ಧಪಾಠ? ಯಾವುದು ಅಪಪಾಠ? ಎಂಬುದನ್ನು ನಿರ್ಣಯಿಸಿವುದೂ ಕಷ್ಟಸಾಧ್ಯ.

ಆದರೆ ಬೃಹತ್ಸಂಹಿತೆಯ ಈ ಶ್ಲೋಕ ನಿರ್ಣಯ ನೀಡಬಲ್ಲದು
ಹೇಮಲಂಬ ಇತಿ ಸಪ್ತಮೇ ಯುಗೇ ಸ್ಯಾದ್ ವಿಲಂಬಿ ಪರತೋ ವಿಕಾರಿ ಚ

ಇಲ್ಲಿ ಹೇಮಲಂಬ ಎಂದೇ ಸ್ಫುಟವಾಗಿ ಹೇಳಿದ್ದಲ್ಲದೆ, ಪಾಠಭೇದವೂ ಇಲ್ಲದಿರುವುದರಿಂದ ಮತ್ತಾವ ಸಂಶಯಕ್ಕೂ ಆಸ್ಪದವಿಲ್ಲ.
ಇಷ್ಟು ಮಾತ್ರವಲ್ಲದೆ, ಸಂವತ್ಸರಫಲಕಥನಪ್ರಕರಣದಲ್ಲಿ ಎಲ್ಲ ಗ್ರಂಥಗಳಲ್ಲಿಯೂ ’ಹೇಮಲಂಬೇ’ ಎಂಬುದಾಗಿ ಸಪ್ತಮೀವಿಭಕ್ತ್ಯಂತ ರೂಪವಿರುವುದೂ ಹೇಮಲಂಬಶಬ್ದದ್ದೇ ಆಗಿದೆ. ಹೇಮಲಂಬಿಶಬ್ದದ ಸಪ್ತಮೀವಿಭಕ್ತಿಯಲ್ಲಿ ಹೇಮಲಂಬಿನಿ ಎಂದಾಗುತ್ತದೆ. ಅದರ ಪ್ರಯೋಗ ಎಲ್ಲಿಯೂ ದೊರಕದು.

ಉದಾಹರಣೆಗೆ, ಅಗ್ನಿಪುರಾಣದಲ್ಲಿ –
ದುರ್ಮುಖೇ ದುರ್ಮುಖೋ ಲೋಕೋ ಹೇಮಲಂಬೇ ನ ಸಂಪದಃ |

ಭವಿಷ್ಯಪುರಾಣದಲ್ಲಿ -
ಪೀಡ್ಯಂತೇ ಸರ್ವಸಸ್ಯಾನಿ ದೇಶೇ ದೇಶೇ ಶುಚಿಸ್ಮಿತೇ |
ಹೇಮಲಂಬೇ ಪ್ರಜಾಃ ಸರ್ವಾಃ ಕ್ಷೀಯಂತೇ ನಾತ್ರ ಸಂಶಯಃ ||

ಅಂತೆಯೇ ಮಾನಸಾಗರಿಯ ಶ್ಲೋಕ
ಅದಾತಾ ಕೃಪಣಃ ಪೂಜ್ಯೋ ಹೇಮಲಂಬೇ ನರೋ ಭವೇತ್

- ಹೀಗೆ ಪ್ರಾಮಾಣಿಕಗ್ರಂಥಗಳಲ್ಲೆಲ್ಲಾ ಹೇಮಲಂಬಶಬ್ದವೇ ಉಲ್ಲಿಖಿತವಾಗಿರುವುದು ಗಮನಾರ್ಹ. ಇದೆಲ್ಲವನ್ನೂ ಪರಿಭಾವಿಸಿದಾಗ, ಹೇಮಲಂಬವೇ ಸಾಧುಶಬ್ದವೆಂದು ನಿರ್ಣಯಿಸುವುದು ಯುಕ್ತ. ಹೇಮ ಲಂಬತೇ ಅತ್ರ – ಎಂಬ ವ್ಯುತ್ಪತ್ತಿಯಿಂದ ಸಂಪತ್ತು ಕಳೆದುಹೋಗುವ ವರ್ಷ ಎಂಬರ್ಥವೂ ಇದಕ್ಕೆ ಸರಿ ಹೊಂದುತ್ತದೆ. ಸಂವತ್ಸರಫಲಕಥನಶ್ಲೋಕಗಳಲ್ಲಿ ಈ ಅರ್ಥವೇ ಮುಖ್ಯವಾಗಿ ಕಾಣಿಸುತ್ತದೆ.

ಇನ್ನೆಲ್ಲಾದರೂ ಹೇಮಲಂಬೀ ಎಂಬ ರೂಪವೂ ದೊರಕಿದಲ್ಲಿ ಎರಡು ಹೆಸರುಗಳೂ ಸರಿಯೆಂಬ ನಿರ್ಣಯಕ್ಕೆ ಬರಬಹುದು.

ಮುಂದಿನ ವರ್ಷದ ಕಥೆಯೂ ಇದೇ. ಅಲ್ಲಿಯೂ ವಿಲಂಬ ಎಂದೋ ವಿಲಂಬೀ ಎಂದೋ ಎಂಬ ಗೊಂದಲವಿದೆ. ಅದರ ಕುರಿತಾಗಿ ಸದ್ಯದಲ್ಲೇ ಬರೆಯುವೆ.
ಪ್ರತಿಕ್ರಿಯೆಗಳಿಗೆ ಸ್ವಾಗತ.

(ಹೆಸರಿನ ವ್ಯುತ್ಪತ್ತಿಯನ್ನು ತೋರುವುದಕ್ಕಷ್ಟೇ ಈ ಫಲದ ಉಲ್ಲೇಖ ಮಾಡಿದ್ದೇನೆ. ದಯವಿಟ್ಟು ಫಲದ ಕುರಿತು ಯಾವುದೇ ಚರ್ಚೆಗೆ ಬರಬೇಡಿ.)

Dr. Ramakrishna Pejathaya
Asst. Professor
Chinmaya University

Kochin, Kerala

No comments:

Post a Comment