Thursday 12 January 2017

ಸವಿದಷ್ಟೂ ಸಾಕೆನಿಸದ ಸಕ್ಕದದ ಸೊದೆ

’ಅಥ ಪ್ರಜಾನಾಮಧಿಪಃ ಪ್ರಭಾತೇ ಜಾಯಾಪ್ರತಿಗ್ರಾಹಿತಗಂಧಮಾಲ್ಯಾಂ’ – ರಘುವಂಶಮಹಾಕಾವ್ಯದ ಎರಡನೆಯ ಸರ್ಗದಾರಂಭದಲ್ಲಿ ಬರುವ ಪ್ರಸಿದ್ಧ ಶ್ಲೋಕವಿದು. ಪ್ರಭಾತಕಾಲದಲ್ಲಿ ಪ್ರಜಾಪಾಲಕ ದಿಲೀಪನು ತನ್ನ ಪತ್ನಿಯಿಂದ ಗಂಧಮಾಲ್ಯಾದಿಗಳಿಂದ ಪೂಜಿಸಲ್ಪಟ್ಟ ನಂದಿನಿಯನ್ನು ವನಕ್ಕೆ ಹೋಗಲನುವಾಗುವಂತೆ ಬಿಟ್ಟನೆಂಬುದು ಈ ಪದ್ಯದ ತಾತ್ಪರ್ಯ. ಇಲ್ಲಿ ಸ್ವಾರಸ್ಯವಿರುವುದು ಜಾಯಾ ಎಂಬ ಶಬ್ದದಲ್ಲಿ. ಜಾಯಾಶಬ್ದಕ್ಕೆ ಪತ್ನಿಯೆಂಬ ಅರ್ಥ ಸರ್ವವಿದಿತ, ಪತಿಯೇ ಈಕೆಯ ಗರ್ಭವನ್ನು ಪ್ರವೇಶಿಸಿ ಮಗುವಿನ ರೂಪದಲ್ಲಿ ಮತ್ತೆ ಹುಟ್ಟಿಬರುತ್ತಾನೆಂಬ ಪ್ರತೀತಿಯನ್ನನುಸರಿಸಿ, ’ಜಾಯತೇ ಅಸ್ಯಾಂ’ ಎಂಬರ್ಥದಲ್ಲಿ ಹುಟ್ಟಿರುವ ಶಬ್ದವಿದು. ಇಂತಹ ಅರ್ಥವೈಶಾಲ್ಯವುಳ್ಳ ಈ ಶಬ್ದವನ್ನು ಪ್ರಯೋಗಿಸುವ ಮೂಲಕ ಕಾಳಿದಾಸನು ದಿಲೀಪಪತ್ನಿ ಸುದಕ್ಷಿಣೆಯು ಮುಂದೆ ಗರ್ಭ ಧರಿಸಲಿದ್ದಾಳೆಂಬರ್ಥವನ್ನು ಧ್ವನಿಸಿದ್ದಾನೆ. (ದಿಲೀಪಸುದಕ್ಷಿಣೆಯರು ಸಂತಾನಾಕಾಂಕ್ಷಿಗಳಾಗಿಯೇ ನಂದಿನೀಸೇವೆಗೆ ತೊಡಗಿರುವುದು.) ಹೀಗೆ ’ಕಾಂತಾಪ್ರತಿಗ್ರಾಹಿತ’ವೆಂದೋ, ’ಪತ್ನೀಪ್ರತಿಗ್ರಾಹಿತ’ವೆಂದೋ ಹೇಳಿದರೂ ವಿವಕ್ಷಿತ ಅರ್ಥ ಸಾಮಾನ್ಯತಃ ಸಿಗುವಂತಿದ್ದರೂ, ಅದರಿಂದ ಛಂದಸ್ಸಿಗೂ ತೊಡಕಿಲ್ಲದಿದ್ದರೂ ಜಾಯಾಶಬ್ದದಿಂದ ಸಿಗಬಹುದಾದ ಅರ್ಥವಿಶೇಷತೆಯನ್ನು ಮನಗಂಡು ಕಾಳಿದಾಸನು ಬಳಸಿರುವುದು ಇಲ್ಲಿನ ಸ್ವಾರಸ್ಯ. ಇದೇ ಕವಿಯು ತನ್ನ ಮೇಘದೂತದಾದಿಯಲ್ಲಿ ’ಒಬ್ಬ ಯಕ್ಷನು ತನ್ನೊಡೆಯನ ಶಾಪಕ್ಕೀಡಾಗಿ ಪತ್ನೀವಿರಹಿತನಾಗಿ ರಾಮಗಿರ್ಯಾಶ್ರಮಗಳಲ್ಲಿ ವಾಸಿಸುತ್ತಿದ್ದ’ನೆಂದು ಹೇಳುವುದನ್ನು ’ಕಶ್ಚಿತ್ ಕಾಂತಾವಿರಹಗುರುಣಾ’ ಎಂದು ಆರಂಭಿಸುತ್ತಾನೆ. ಇಲ್ಲಿ ಪತ್ನಿಯೆಂಬರ್ಥದಲ್ಲಿ ’ಕಾಂತಾ’ಶಬ್ದವಿದೆ. ಯಕ್ಷನಿಗೆ ಪತ್ನಿಯು ಪತ್ನಿಯಷ್ಟೇ ಅಲ್ಲದೆ ಪ್ರಿಯೆಯೂ ಆಗಿದ್ದಳೆಂಬರ್ಥವನ್ನು ಈ ಕಾಂತಾಶಬ್ದ ತೋರಗೊಡುತ್ತದೆ. (ಎಲ್ಲರಿಗೂ ಹೆಂಡತಿ ಪ್ರಿಯೆಯಾಗಿಯೇ ಇರಬೇಕೆಂದಿಲ್ಲ ತಾನೆ!) ಹೀಗೆ ಹೆಂಡತಿಯೆಂಬರ್ಥದಲ್ಲಿ ಜಾಯಾ, ಭಾರ್ಯಾ, ಪತ್ನೀ, ಕಾಂತಾ, ದ್ವಿತೀಯಾ – ಇತ್ಯಾದಿ ಹಲವು ಶಬ್ದಗಳಿದ್ದು, ಅವುಗಳೆಲ್ಲವೂ ಒಂದೊಂದು ಅರ್ಥವಿಶೇಷದ ಹಿನ್ನೆಲೆಯಿಂದ ಮೂಡಿಬಂದಿದ್ದು, ಕವಿಯು ತನ್ನ ವಿವಕ್ಷೆಗನುಗುಣವಾಗಿ ಸಮುಚಿತಶಬ್ದವನ್ನು ಬಳಸಿದ್ದಾನೆ.
          ಇದು ಸಂಸ್ಕೃತಭಾಷೆಯ ವೈಶಿಷ್ಟ್ಯಗಳಲ್ಲೊಂದು. ಒಂದರ್ಥದಲ್ಲಿ ಹಲವು ಶಬ್ದಗಳಿದ್ದು ಇವು ಈ ಭಾಷೆಯ ವಿಪುಲಶಬ್ದಸಂಪತ್ತಿಗೆ ಸ್ರೋತವಾಗಿರುವುದಷ್ಟೇ ಅಲ್ಲದೆ ಒಂದೊಂದು ವಿಶೇಷಾರ್ಥದ ಆಧಾರದಿಂದಲೇ ಮೂಡಿದ್ದಾಗಿವೆ. ಇನ್ನೊಂದು ಉದಾಹರಣೆ ನೋಡುವುದಾದರೆ, ’ಮೈ’ ಎಂಬರ್ಥದಲ್ಲಿ ಕಾಯ, ದೇಹ, ಶರೀರ, ತನು ಇತ್ಯಾದಿ ಶಬ್ದಗಳಿವೆ. ದಿನದಿಂದ ದಿನಕ್ಕೆ ಪುಷ್ಟವಾಗುವಂಥದ್ದು ಎಂಬರ್ಥದಲ್ಲಿ ದೇಹಶಬ್ದವಿದ್ದರೆ, ಯೌವನಾನಂತರ ಪ್ರತಿದಿನವೂ ಶೀರ್ಣ(ಜೀರ್ಣ)ವಾಗುವಂಥದ್ದು ಎಂಬರ್ಥದಲ್ಲಿ ಶರೀರಶಬ್ದವಿದೆ. ಆದ್ದರಿಂದಲೇ ಕ್ಷಾತ್ರಕುಲಾಗ್ರಣಿಯಾದ ದಿಲೀಪನ ಮೈಯನ್ನು ಬಣ್ಣಿಸುವ ’ಆತ್ಮಕರ್ಮಕ್ಷಮಂ ದೇಹಂ ಕ್ಷಾತ್ರೋ ಧರ್ಮ ಇವಾಶ್ರಿತಃ’ ಎಂಬ ಕಾಳಿದಾಸನ ನುಡಿಯಲ್ಲಿ ದೇಹಶಬ್ದವಿದೆ. ಆದರೆ ’ಶರೀರಮಾದ್ಯಂ ಖಲು ಧರ್ಮಸಾಧನಮ್’ ಎಂಬ ಅವನದೇ ಸುಭಾಷಿತಪ್ರಾಯ ವಾಕ್ಯದಲ್ಲಿ ಧರ್ಮಸಾಧನವಾದ ಈ ದೇಹ ಹೆಚ್ಚು ಕಾಲ ಉಳಿಯುವಂಥದ್ದಲ್ಲ, ಆದ್ದರಿಂದ ಹೆಚ್ಚು ಹೆಚ್ಚು ಧರ್ಮಕರ್ಮಗಳನ್ನು ಮಾಡಬೇಕೆಂಬ ಅರ್ಥವನ್ನು ತೋರಲೋಸುಗ ಶರೀರಶಬ್ದದ ಪ್ರಯೋಗವಿದೆ. ಇನ್ನು ಕಣ್ಣು ಎಂಬರ್ಥದಲ್ಲಿರುವ ಶಬ್ದಗಳು ನೇತ್ರ, ನಯನ, ಚಕ್ಷುಃ ಇತ್ಯಾದಿಗಳು. ಇಲ್ಲಿ ಚಷ್ಟೇ ಇತಿ ಚಕ್ಷುಃ ಎಂಬ ವ್ಯುತ್ಪತ್ತಿಗನುಸಾರ ಮಾತನಾಡುವ ಇಂದ್ರಿಯ ಎಂಬರ್ಥದಲ್ಲಿ ಚಕ್ಷುಃಶಬ್ದ ಹುಟ್ಟಿರುವುದು. (ಬಾಯಿಗೂ ಹೇಳಲಾಗದ್ದನ್ನು ಕಣ್ಣು ಹೇಳುವುದಲ್ಲವೇ !) ಇದು ನಮ್ಮನ್ನು ಒಯ್ಯುವ ಇಂದ್ರಿಯವೂ ಆದ್ದರಿಂದ ನೇತ್ರ ಮತ್ತು ನಯನ ಶಬ್ದಗಳು ಬಂದಿವೆ. (ಕಣ್ಣಿನಿಂದ ಕಾಣದೆ ಕಾಲಿಡಲಾಗದು - ದೃಷ್ಟಿಪೂತಂ ನ್ಯಸೇತ್ ಪಾದಮ್). ಇನ್ನು ಕಾಣುವ ಸ್ವಭಾವವನ್ನಾಶ್ರಯಿಸಿ ದೃಕ್ ಈಕ್ಷಣ ಇತ್ಯಾದಿ ಶಬ್ದಗಳು ಹುಟ್ಟಿರುವುದು.  
ಇನ್ನೊಂದು ತೆರನಾದ  ಸ್ವಾರಸ್ಯ ನೋಡೋಣ. ವಾಗರ್ಥಾವಿವ ಸಂಪೃಕ್ತೌ ಎಂದು ಕಾಳಿದಾಸನು ಮಾಡಿರುವ ಶಿವನ ಅರ್ಧನಾರೀಶ್ವರಸ್ವರೂಪದ ಸ್ತುತಿ ಹೆಚ್ಚಿನ ನಾಲಗೆಗಳಲ್ಲಿ ಹರಿದಾಡುತ್ತಿರುವುದೇ ಹೌದು. ವಾಗರ್ಥಗಳಂತೆ ಪರಸ್ಪರ ಅವಿನಾಭಾವದಿಂದಿರುವ ಜಗದ ತಾಯ್ತಂದೆಯರಾದ ಪಾರ್ವತೀಪರಮೇಶ್ವರರನ್ನು ಈ ಪದ್ಯದಲ್ಲಿ ವಂದಿಸುವ ಕವಿಯು ಅವರೀರ್ವರ ಬೆಸುಗೆಯ ಗಾಢತೆಯನ್ನು ತೋರಲು ಸಂಪೃಕ್ತೌ ಎಂಬ ಶಬ್ದವನ್ನು ಪ್ರಯೋಗಿಸಿದ್ದಾನೆ. ಸಂಯುಕ್ತೌ ಎಂದರೂ ಅರ್ಥ-ಛಂದಸ್ಸುಗಳಿಗೆ ಬಾಧೆಯಿಲ್ಲ. ಆದರೂ ಸಂಪೃಕ್ತೌ ಎಂಬುದನ್ನು ಉಚ್ಚರಿಸಬೇಕಾದರೆ ಎರಡು ತುಟಿಗಳು ಕೂಡಬೇಕು. ಶಿವಪಾರ್ವತಿಯರ ನಿತ್ಯಾನ್ಯೋನ್ಯಸಂಸಕ್ತಶರೀರವನ್ನು ತುಟಿಗೂಡಿಸಿ ಉಚ್ಚರಿಸಬೇಕಾದ ಸಂಪೃಕ್ತಶಬ್ದವೇ ಹೆಚ್ಚು ಸಮರ್ಥವಾಗಿ ತಿಳಿಸುವುದೆಂಬುದು ಇಲ್ಲಿ ಕವಿಯ ಆಶಯ. ಈ ಕವಿಹೃದಯ ನಮನೀಯವೆಂಬುದು ಒಂದಂಶವಾದರೆ, ಇಂತಹ ಸಾಧ್ಯತೆಗಳಿಗೆ ಬೇಕಾದ ಶಬ್ದಸಂಪತ್ತಿಯನ್ನಿತ್ತಿರುವ ಸಂಸ್ಕೃತದ ಸೊಗಸುತನವೂ ಸ್ಮರಣೀಯ.
ಇನ್ನು ಕೆಲವು ಶಬ್ದಗಳ (ಅದರಲ್ಲೂ ಸಮಾಸ ಹೊಂದಿದ ಪದಗಳ) ಶಬ್ದಾರ್ಥ ಒಂದು ತೆರನಾಗಿದ್ದರೆ, ಅವುಗಳ ವ್ಯಂಗ್ಯಾರ್ಥ ಮತ್ತೊಂದು ತೆರನಾಗಿರುತ್ತದೆ. ಉದಾಹರಣೆಗೆ ದೇವಾನಾಂಪ್ರಿಯ. ’ದೇವತೆಗಳಿಗೆ ಪ್ರಿಯನಾದವನು’ ಎಂಬುದು ಇದರ ಅವಯವಾರ್ಥವಾದರೂ ಈ ಪದವಿರುವುದು ಮೂರ್ಖಾರ್ಥದಲ್ಲಿ. ಇವನ ರೀತಿನೀತಿಗಳು ದೇವರಿಗಷ್ಟೇ ಪ್ರಿಯ, ಮನುಷ್ಯರಿಗಲ್ಲವೆಂದು ತಿವಿಯುವ ಶಬ್ದವಿದು. ಇಂಥದ್ದೇ ಇನ್ನೊಂದು ಪದ ಪಂಡಿತಪುತ್ರ. ಪಂಡಿತನ ಮಗ ಎಂಬುದು ಇದರ ಶಬ್ದಾರ್ಥ, ಆದರೆ ಇವನ ತಂದೆಯಷ್ಟೇ ಪಂಡಿತ, ಇವನು ಶತಮೂರ್ಖನೆಂಬರ್ಥದಲ್ಲಿ ಈ ಶಬ್ದ ರೂಢಿಯಲ್ಲಿದೆ. ಲಾಲಾಟಿಕವೆಂಬ ಶಬ್ದಕ್ಕೆ ಹಣೆ ನೋಡುವವನು ಎಂದರ್ಥ. ಏನಾದರೂ ಕೆಲಸ ಹೇಳಿದಲ್ಲಿ ಅದನ್ನು ಅರ್ಥೈಸಿಕೊಳ್ಳುವ ಅಥವಾ ಮಾಡುವ ಬುದ್ದಿಮತ್ತೆಯಿಲ್ಲದ, ಹಾಗೆಯೇ ನಿಂತು ನೋಡುತ್ತಿರುವವನು ಎಂಬ ವ್ಯಂಗ್ಯಾರ್ಥವಿಲ್ಲಿದೆ. ಶೀತಕ ಉಷ್ಣಕ ಎಂಬೆರಡು ಶಬ್ದಗಳೂ ಇದೇ ಜಾತಿಯವುಗಳು. ಅತ್ಯಂತ ಆಲಸ್ಯದಿಂದ ನಿಧಾನವಾಗಿ ಕೆಲಸಗಳನ್ನು ಮಾಡುವವನು ಶೀತಕ. ಅದಕ್ಕೆ ವಿರುದ್ಧವಾಗಿ, ಅತ್ಯಂತ ಚುರುಕುತನದಿಂದ ಕಾರ್ಯಕರಣಸ್ವಭಾವದವನು ಉಷ್ಣಕ. ’ಧರ್ಮಧ್ವಜ’ವೆಂಬ ಶಬ್ದಕ್ಕೆ ಮೇಲ್ನೋಟಕ್ಕೆ ಕಾಣುವ ಧಾರ್ಮಿಕ ಎಂಬರ್ಥವು ಅಲ್ಲ. ಬದಲಾಗಿ, ಹೃದಯದಲ್ಲಿ ಧರ್ಮಶ್ರದ್ಧೆಯಿಲ್ಲದಿದ್ದರೂ ಧಾರ್ಮಿಕತೆಯ ಸೋಗು ಹಾಕುತ್ತಿರುವವನು ಎಂಬರ್ಥ. ಇನ್ನು ತೀರ್ಥಕಾಕವೆಂಬ ಶಬ್ದ ಅತ್ಯಂತ ವಿಲಕ್ಷಣವಾದದ್ದು. ಕಾಗೆಯು ಎಲ್ಲಿಯೂ ಹೆಚ್ಚುಕಾಲ ನಿಲ್ಲುವುದಿಲ್ಲ. ಅಂತೆಯೇ ಯಾವ ಶಿಷ್ಯನು ಒಬ್ಬನೇ ಗುರುವಿನಲ್ಲಿ ನಿಲ್ಲದೆ, ಬೇರೆ ಬೇರೆ ಗುರುಗಳಲ್ಲಿ ಸ್ವಲ್ಪ ಸ್ವಲ್ಪ ಕಾಲ ನಿಂತು, ಎಲ್ಲಿಯೂ ಸಲ್ಲದವನು ಎಂಬ ಅರ್ಥವಿಶೇಷತೆ ಈ ಶಬ್ದಕ್ಕಿದೆ.
ವಿಸ್ತೃತಾರ್ಥವನ್ನು ಸಂಕ್ಷಿಪ್ತವಾಗಿ ಹೇಳುವಂತಹ ವ್ಯವಸ್ಥೆಯಿರುವುದೂ ಇಲ್ಲಿನ ಇನ್ನೊಂದು ವಿಶೇಷತೆ. ಇಲ್ಲಿ, ಸುಪ್ರಭಾತಂ ಎಂದು ಹೇಳುವವನು ಸೌಪ್ರಭಾತಿಕ. ಚೆನ್ನಾಗಿ ಸ್ನಾನವಾಯಿತೇ? (ಅಪಿ ಸುಸ್ನಾತಂ?) ಎಂದು ಕೇಳುವ ಹಿತೈಷಿ ಸೌಸ್ನಾತಿಕ. ಸ್ವಾಗತಂ ಎಂದೆನ್ನುವವನು ಸ್ವಾಗತಿಕ. ಇನ್ನು, ಅಳುತ್ತಾನೆ ಎನ್ನುವುದಕ್ಕೆ ರೋದಿತಿ ಎಂಬುದು ಕ್ರಿಯಾಪದವಾದರೆ, ಮತ್ತೆ ಮತ್ತೆ (ಅಥವಾ ಬಿಕ್ಕಿ ಬಿಕ್ಕಿ) ಅಳುತ್ತಾನೆ ಎಂಬರ್ಥದಲ್ಲಿ ರೋರುದ್ಯತೇ ಅಥವಾ ರೋರುದೀತಿ ಎಂದು ಹೇಳಬಹುದು. ಅಂತೆಯೇ ಪಠತಿ = ಓದುತ್ತಾನೆ. ಪಾಪಠ್ಯತೇ = ಚೆನ್ನಾಗಿ ಅಥವಾ ಮತ್ತೆ ಮತ್ತೆ ಓದುತ್ತಾನೆ. ಅಂತೆಯೇ, ಹೇಳುವ ಬಯಕೆ ಎಂಬರ್ಥವನ್ನು ವಿವಕ್ಷೆಯೆಂಬ ಒಂದೇ ಶಬ್ದ ಕೊಡಬಲ್ಲುದು. ಹೀಗೆಯೇ ತಿಳಿಯುವ ಬಯಕೆ = ಜಿಜ್ಞಾಸೆ, ಉಣ್ಣುವ ಬಯಕೆ = ಬುಭುಕ್ಷೆ ಇತ್ಯಾದಿ ಶಬ್ದಗಳು. ಇನ್ನು, ’ವೃದ್ಧಾಯತೇ’ ಎಂದು ಹೇಳಿದರೆ ಸಾಕು, ವೃದ್ಧನಂತೆ ವ್ಯವಹರಿಸುತ್ತಾನೆಯೆಂಬರ್ಥ ಸಿದ್ಧ. ಪರಸ್ಪರ ಜುಟ್ಟು ಹಿಡಿದು ಮಾಡುತ್ತಿರುವ ಕಲಹ ಎಂಬರ್ಥಕ್ಕೆ ’ಕೇಶಾಕೇಶಿ’ ಎಂದರೆ ಸಾಕು. ಪಂಡಿತನಲ್ಲದಿದ್ದರೂ, ತಾನು ಪಂಡಿತನೆಂದು ತಿಳಿದವನು ಪಂಡಿತಂಮನ್ಯ. ಹೀಗೆ ಇನ್ನೂ ಅನೇಕ ಬಗೆಗಳಿವೆ. ಈ ತೆರನಾದ ವಿಶಿಷ್ಟಪದಪ್ರಯೋಗಗಳೂ ಸಕ್ಕದಕ್ಕೆ ಸಿರಿವಂತಿಕೆಯನ್ನಿತ್ತಿವೆ.
ಇನ್ನು ಸಂಧಿ-ಸಮಾಸಾದಿಗಳ ವೈಪುಲ್ಯ-ವೈವಿಧ್ಯದಿಂದ ಮಾಡಬಹುದಾದ ನಾನಾವಿಧ ಪದಚ್ಛೇದಗಳು, ಅವುಗಳಿಂದ ಹೊಮ್ಮಿಸಬಹುದಾದ ಅರ್ಥವಿಶೇಷಗಳು ವಿಸ್ಮಯಾವಹ. ಉದಾಹರಣೆಗೆ ’ದಾನವಾರಿ’ಶಬ್ದವನ್ನು ದಾನ ವಾರಿ - ಎಂದು ವಿಂಗಡಿಸಿದರೆ ದಾನಕ್ಕೆ ಉಪಯುಕ್ತವಾದ ನೀರು ಎಂಬರ್ಥ. ಅದನ್ನೇ ದಾನವ ಅರಿ ಎಂದು ಬಿಡಿಸಿದರೆ ರಾಕ್ಷಸಶತ್ರು ಎಂದಾಗುತ್ತದೆ. ’ಕಾಂತಾರಹಿತ’ಶಬ್ದವೂ ಇಂತೆಯೇ. ಕಾಂತಾ ರಹಿತ = ಕಾಂತೆಯಿಲ್ಲದವನು. ಕಾಂತಾರ ಹಿತ = ಯಾರಿಗೆ ಅರಣ್ಯವೇ ಹಿತವಾಗುವುದೋ ಅವನು. ಈ ವೈಶಿಷ್ಟ್ಯವು ಅನಿತರಸಾಧಾರಣವಾಗಿದ್ದು ಶ್ಲೇಷ-ವಿರೋಧಾಭಾಸಗಳೇ ಮೊದಲಾದ ನಾನಾಕಾವ್ಯಚಮತ್ಕೃತಿಗಳಿಗೆ ಇಂಬನ್ನಿತ್ತಿದೆ. ಉದಾಹರಣೆಗೆ “ಸರ್ವದೋಮಾಧವಃ ಪಾಯಾತ್ ಸ ಯೋಗಂಗಾಮದೀಧರತ್” ಎಂಬ ಶ್ಲೋಕ. ಇಲ್ಲಿ, ’ಸರ್ವದೋಮಾಧವಃ’ ಪದಪುಂಜವನ್ನು ಸರ್ವದಃ ಮಾಧವಃ ಎಂದು ವಿಂಗಡಿಸಿದರೆ ಎಲ್ಲವನ್ನೂ ನೀಡುವ ಮಹಾವಿಷ್ಣುವು ರಕ್ಷಿಸಲಿ ಎಂದರ್ಥ, ಇದನ್ನೇ ’ಸರ್ವದಾ ಉಮಾಧವಃ’ ಎಂದು ವಿಂಗಡಿಸಿದಲ್ಲಿ ಶಿವನು ಯಾವಾಗಲೂ ರಕ್ಷಿಸಲಿ ಎಂದಾಗುವುದು. ಯೋಗಂಗಾಮದೀಧರತ್ ಎಂಬ ವಿಶೇಷಣವೂ ಹೀಗೆಯೇ. ಯಃ ಅಗಂ ಗಾಮ್ ಅದೀಧರತ್ ಎಂದು ವಿಂಗಡಿಸಿದಾಗ ಯಾರು ಬೆಟ್ಟವನ್ನೂ ಗೋವುಗಳನ್ನೂ ಧರಿಸಿದ್ದಾನೆಯೋ ಅವನು ಎಂಬರ್ಥವಾಗಿ ವಿಷ್ಣುವಿಗೆ ವಿಶೇಷಣ. ಯಃ ಗಂಗಾಮ್ ಅದೀಧರತ್ ಎಂದಾಗ, ಯಾರು ಗಂಗೆಯನ್ನು ಧರಿಸಿದ್ದಾನೋ ಅವನು ಎಂಬರ್ಥವಾಗಿ ಶಿವನಿಗೆ ವಿಶೇಷಣವಾಗುವುದು, ಹೀಗೆ ಒಂದೇ ವಾಕ್ಯದಿಂದ ಹರಿಹರರೀರ್ವರನ್ನೂ ಸ್ತುತಿಸಬಹುದಾದ ಈ ರಮಣೀಯ ಪರಿ ಭಾಷಾಸಾಮರ್ಥ್ಯದಿಂದಲೇ ಸೃಷ್ಟವಾಗಿರುವಂಥದ್ದು.
ಅತ್ಯಲ್ಪಶಬ್ದಗಳಲ್ಲಿ ಸೂತ್ರರೂಪವಾಗಿ ಸ್ವವಿಷಯಕ ನಿಯಮಗಳನ್ನು ಹಿಡಿದಿಡುವುದು ಶಾಸ್ತ್ರಸ್ವಭಾವ. ಶ್ಲೇಷರೂಪಕಾದಿ ನಾನಾಪ್ರಕಾರಗಳಿಂದ ಚಮತ್ಕಾರಗಳನ್ನು ಸೃಷ್ಟಿಸಿ, ನಾನಾವರ್ಣನೆಗಳಿಂದ ಪ್ರಕೃತಾರ್ಥವನ್ನು ವಿಸ್ತರಿಸಿ, ಸರಸತೆಯನ್ನೂ ಕಾಪಿಟ್ಟು ಅನಿರ್ವಚನೀಯಾನಂದವನ್ನೀಯುವುದು ಕಾವ್ಯಗಳ ಸ್ವಭಾವ. ಈ ಸಂಕ್ಷೇಪವಿಕ್ಷೇಪಗಳೆರಡಕ್ಕೂ ವಿಪುಲಾವಕಾಶವನ್ನೀಯುವುದರಿಂದಲೇ ಸಂಸ್ಕೃತವು ಈ ಎರಡು ಪ್ರಕಾರಗಳಿಗೂ ಹಿರಿಯಾಸರೆ. ಆದ್ದರಿಂದಲೇ ಇದರಲ್ಲಿನ ಶಾಸ್ತ್ರಕಾವ್ಯಪರಂಪರೆಗಳು ಎಂದೆಂದಿಗೂ ಅಜರಾಮರವಾಗಿವೆ.
ಸಂಸ್ಕೃತದಲ್ಲಿರುವ ವಿಷಯಗಳ ಆಳ-ಅಗಲಗಳ, ಅವುಗಳಿಂದ ನಮಗಾಗುವ ಹಲಬಗೆಯ ಪ್ರಯೋಜನಗಳ ಕುರಿತ ಲೇಖನ-ವ್ಯಾಖ್ಯಾನ-ಚರ್ಚೆಗಳು ನಡೆಯುತ್ತಲೇ ಇವೆ. ಅವು ಬಹುಜನರಿಗೆ ತಿಳಿದೂ ಇವೆ. ಇವೆಲ್ಲದರ ಹೊರತಾಗಿಯೂ ಇದೊಂದು ಭಾಷೆಯಾಗಿಯೇ ನಮಗೆ ಪ್ರಿಯವಾಗುತ್ತದೆ. ಇದು ನಮ್ಮ ಅನುಭವವೂ ಹೌದೆನ್ನುವ ಲಕ್ಷಾಂತರ ಜನರೂ ನಮ್ಮೊಂದಿಗಿದ್ದಾರೆ. ಇಂತಹ ಭಾಷೆಯನ್ನು ಮತ್ತು ಅದರಲ್ಲಿನ ವಿಶೇಷತೆಗಳನ್ನು ಸಾಧ್ಯವಾದಷ್ಟು ಕಲಿಯುವ ಮತ್ತು ಕಲಿಸುವ ಸಂಕಲ್ಪಗೈಯೋಣ.

ಸಂಸ್ಕೃತದ ಶಬ್ದಸಂಪತ್ತಿ ಸಂಧಿಸಮಾಸಾದಿಸೌಕರ್ಯಗಳೇ ಮೊದಲಾದವುಗಳಿಂದ ಸೃಷ್ಟಿಸಬಹುದಾದ ಕಾವ್ಯಚಮತ್ಕಾರಗಳು ಎಣೆಯಿಲ್ಲದ್ದೆಂದು ಹೇಳಿದೆನಷ್ಟೇ ! ಅದಕ್ಕೊಂದು ದೃಷ್ಟಾಂತ ಇಲ್ಲಿದೆ. ಸಮಕಾಲೀನ ಕವಿತಲ್ಲಜರೂ, ರಾಷ್ಟ್ರಪತಿಗಳು ನೀಡುವ ವ್ಯಾಸ ಬಾದರಾಯಣ ಪುರಸ್ಕಾರಕ್ಕೆ ಈ ವರ್ಷ ಪಾತ್ರರೂ ಆಗಿರುವ ಬೆಂಗಳೂರಿನ ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಅವರ ಭಾಷಾಶ್ಲೇಷದ ಶ್ಲೋಕವೊಂದು ಇಂಗ್ಲಿಷ್-ಸಂಸ್ಕೃತಗಳೆರಡರಲ್ಲೂ ಅರ್ಥೈಸಬಹುದಾಗಿದ್ದು ಅತ್ಯಂತ ವಿಶಿಷ್ಟವೆನಿಸಿದೆ. ಆ ಶ್ಲೋಕ –
ಗೋವಿಂದ ವಾರ್ದವೇ ಯೂನೋ
ಮೈತ್ರೀ ಸಂಸಾರವೇಶಿಕಾ |
ರಮಾಸರೋಬಾಲಾರ್ಕೋಽಸಿ
ಹರೀಶೋಽಸೂನವೇಟ್ ದರಮ್ ||
ಇದನ್ನು ಗಟ್ಟಿಯಾಗಿ ಉಚ್ಚರಿಸಿದರೆ ಆಂಗ್ಲಭಾಷಾವಾಕ್ಯಗಳೂ ವ್ಯಕ್ತವಾಗುತ್ತವೆ.
ಗೋವಿಂದ ವಾರ್ದವೇ ಯೂನೋ – Go! Win the war the way you know.
ಮೈತ್ರೀ ಸಂಸಾರವೇಶಿಕಾ – My three sons are away shikar.
ರಮಾಸರೋಬಾಲಾರ್ಕೋಽಸಿ – Amass a robe, all are cosy. 
ಹರೀಶೋಽಸೂನವೇಟ್ ದರಮ್ – Hurry! Show soon! Await the rum.
ಕೃಷ್ಣಸ್ತುತಿರೂಪವಾದ ಈ ಶ್ಲೋಕದ ಅರ್ಥವೂ ರಮಣೀಯವಾಗಿರುವುದು ಇನ್ನೊಂದು ವಿಶೇಷ. (ಈ ರೀತಿಯ ಚಿತ್ರಕಾವ್ಯಗಳಲ್ಲಿ ಹಲವೆಡೆ ಅನ್ವಯ-ಅರ್ಥಾವಬೋಧಗಳಿಗೆ ದ್ರಾವಿಡಪ್ರಾಣಾಯಾಮ ಮಾಡಬೇಕಾದ ಸ್ಥಿತಿಯೂ ಇರುತ್ತದೆ.) ಉಭಯಭಾಷಾಪ್ರಾಗಲ್ಭ್ಯವಿರುವ ಕವಿಗಷ್ಟೇ ಇಂತಹ ಸಿದ್ಧಿ ಸಾಧ್ಯವಾಗುವುದೆಂಬ ಅಂಶ ಒಂದೆಡೆಯಾದರೆ, ಇದಕ್ಕಾಧಾರವಾಗಿರುವುದು ಸಂಸ್ಕೃತದ ಶ್ರೀಮಂತಿಕೆಯೆಂಬ ತಥ್ಯವೂ ಮನನೀಯ.


No comments:

Post a Comment