Thursday 12 January 2017

ಸಂಸ್ಕೃತದ ಸಾರ್ವತ್ರಿಕತೆ ಮತ್ತು ಸರ್ವಜನೀನತೆ

ಒಂದು ಕಾಲೇಜಿನಲ್ಲಿ ಇತ್ತೀಚೆಗೆ ಅವಸಾನದಂಚಿನಲ್ಲಿರುವ ಭಾಷೆಗಳ ಬಗೆಗೆ ಸೆಮಿನಾರ್ ನಡೆಯುವುದಿತ್ತು. ಅದಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ನನ್ನನ್ನಾಹ್ವಾನಿಸುತ್ತಾ “ನೀವು ‘ಸಂಸ್ಕೃತ ಸ್ಕಾಲರ್ ಗಳು ಅವಶ್ಯ ಬರಬೇಕು. ಈಗ ಹೆಚ್ಚಿನ ಸಮಸ್ಯೆಯಿರುವುದು ಸಂಸ್ಕೃತಕ್ಕೇ” ಎಂದುಬಿಟ್ಟರು. ’ಒಂದಷ್ಟು’ ಉತ್ತರಿಸಿಯೇ ಮರಳಿದೆನೆಂಬುದು ಬೇರೆ ಮಾತು! ಆದರೆ ಪ್ರಾಜ್ಞರೆನಿಸಿರುವ ವ್ಯಕ್ತಿಗಳಲ್ಲೂ ಈ ಅಜ್ಞತೆಯನ್ನೋ ಭ್ರಮೆಯನ್ನೋ ಕಂಡು ಅಚ್ಚರಿಗೊಂಡದ್ದಂತೂ ಹೌದು. ನಮ್ಮ ದೇಶಕ್ಕೇ ಪ್ರತಿಷ್ಠಾಪಾರಮ್ಯವನ್ನಿತ್ತಿರುವ ಸಂಸ್ಕೃತಕ್ಕೆ ಸಲ್ಲಬೇಕಾದ ಪೂರ್ಣಪ್ರಮಾಣದ ಪ್ರೀತ್ಯಾದರಗಳು ಕಾಣಿಸುತ್ತಿಲ್ಲವೆಂಬುದು ದಿಟವೇ ಆದರೂ, “ಅವಸಾನ”ದಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಸೇರಿಸಬೇಕಾದ ದುಃಸ್ಥಿತಿ ಖಂಡಿತವಾಗಿಯೂ ಇಲ್ಲ. ಕಾರಣ, ಈ ಭಾಷೆಯು ಎಲ್ಲ ಎಲ್ಲೆಗಳನ್ನೂ ಮೀರಿ ವಿಶ್ವವ್ಯಾಪಿಯಾಗಿ ಪಸರಿಸುತ್ತಿರುವುದು.
ಈ ಬರೆಹಕ್ಕೆ ತೊಡಗಿದಾಗ, ಕೆಲವು ಓದುಗರಿಗೆ ಇದು “ಚರ್ವಿತಚರ್ವಣ”ವೆಂದೆನಿಸೀತೋ ಎಂಬ ಆತಂಕವೂ ಕಾಡಿದ್ದಿದೆ. ಈ ಕಾಲದಲ್ಲಿ ಸಂಸ್ಕೃತವು ಹೇಗೆ ಮೇದಿನಿಯೆಲ್ಲೆಡೆ ಮಾನ್ಯವಾಗಿದೆಯೆಂಬುದು ಅಂತರ್ಜಾಲದಲ್ಲಿ, ವಾರ್ತಾಮಾಧ್ಯಮಗಳಲ್ಲಿ ಆಯಾ ಸಂದರ್ಭಗಳಲ್ಲಿ ಬಿತ್ತರವಾಗುತ್ತಲೇ ಇದೆ. ಆದರೂ, ಈ ವಾರ್ತೆಗಳು ಬಹುಜನರ ಅರಿವಿಗೆ ಬಂದಿಲ್ಲವೆಂಬುದೂ ಮೇಲಿನ ದೃಷ್ಟಾಂತದಿಂದ ಸುವೇದ್ಯ. ಪ್ರಾಜ್ಞರ ವಿಷಯದಲ್ಲೇ ಹೀಗಾದಲ್ಲಿ ಜನಸಾಮಾನ್ಯ ಸ್ಥಿತಿಯೇನು ? ಹಾಗಾಗಿ ಸಂಸ್ಕೃತಪ್ರೇಮವಿಂದು ಹೇಗೆ ಸೀಮಾತೀತವಾಗಿ ವಿಶ್ವದೆಲ್ಲೆಡೆ ವ್ಯಾಪಿಸಿದೆಯೆಂಬುದನ್ನು ವಿವರಿಸುವುದು ಮತ್ತು ಸಂಸ್ಕೃತದ ಸಾಂಪ್ರತಿಕ ಸ್ಥಿತಿಗತಿಗಳ, ಒಂದಷ್ಟು ಸ್ವಾರಸ್ಯಕರ ಅಂಶಗಳ ಕುರಿತು ಬೆಳಕು ಚೆಲ್ಲುವುದು ಪ್ರಕೃತ ಲೇಖನದ ಉದ್ದೇಶ.
’ವಿಶ್ವವ್ಯಾಪಿ ಸಂಸ್ಕೃತ’ವೆಂಬ ವಿಷಯದಲ್ಲಿ ಮೊತ್ತಮೊದಲು ಉಲ್ಲೇಖಿಸಲಿಷ್ಟವಾಗುವ ವಿದ್ಯಾಲಯ ಲಂಡನ್ ನಲ್ಲಿರುವ “ಸೇಂಟ್ ಜೇಮ್ಸ್ ಇಂಡಿಪೆಂಡೆಂಟ್ ಸ್ಕೂಲ್”. ಏಕೆಂದರೆ ಇಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಸಂಸ್ಕೃತ ಕಡ್ಡಾಯ! ಕಳೆದ ೩೫ ವರ್ಷಗಳಿಂದ ಸಂಸ್ಕೃತಾಧ್ಯಾಪನ ನಡೆಸಿಕೊಂಡು ಬರುತ್ತಿರುವ ಪ್ರಕೃತವಿದ್ಯಾಲಯಕ್ಕೆ ಈಗ ಈ ಕಾರಣದಿಂದಲೇ ವಿಶಿಷ್ಟ ಪ್ರತಿಷ್ಠೆಯೂ ಇದೆ. ಅಮೇರಿಕಾ, ನ್ಯೂಜಿಲ್ಯಾಂಡ್ ಇತ್ಯಾದಿ ಏಳು ದೇಶಗಳಲ್ಲಿ ಈ ಶಾಲೆಯ ಶಾಖೆಗಳಿದ್ದು, ಎಲ್ಲಾ ಕಡೆಗಳಲ್ಲಿಯೂ ಸಂಸ್ಕೃತದ ಕಲಿಕೆ ಅನಿವಾರ್ಯವೆಂಬ ಅಂಶವೂ ನಮ್ಮನ್ನು ಬೆರಗುಗೊಳಿಸುತ್ತದೆ. ಸಂಸ್ಕೃತದ ಕುರಿತು ಅಲ್ಲಿನ ಸಂಸ್ಕೃತವಿಭಾಗದ ಮುಖ್ಯಸ್ಥರಾದ ಡಾ. ವಾರ್ವಿಕ್ ಜೆಸ್ಸೊಪ್ ರವರ ಬಿಚ್ಚುಗೊರಳಿನ ಮೆಚ್ಚುನುಡಿಯಿಂತಿದೆ -
This is the most perfect and logical language in the world, the only one that is not named after the people who speak it.  Indeed the word itself means perfected language.
ನ್ಯೂಜಿಲ್ಯಾಂಡ್ ನ ಆಕ್ಲಂಡಿನಲ್ಲಿರುವ ’ಫಿಸಿನಾ ಸ್ಕೂಲ್’ನಲ್ಲಿಯೂ ಒಂದರಿಂದ ಎಂಟರವರೆಗೆ ಸಂಸ್ಕೃತ ಅನಿವಾರ್ಯ. ವಿದ್ಯಾರ್ಥಿಗಳ ಮಾನಸಿಕ ವಿಕಾಸ, ಬೌದ್ಧಿಕ ಪ್ರಗತಿ, ಶಾರೀರಿಕ ದಾರ್ಢ್ಯ – ಈ ಮೂರು ಅಂಶಗಳನ್ನು ಲಕ್ಷ್ಯದಲ್ಲಿರಿಸಿ ೧೯೯೭ರಲ್ಲಿ ಆರಂಭಿಸಲ್ಪಟ್ಟ ಈ ಶಾಲೆ ತನ್ನ ಲಕ್ಷ್ಯದ ಪರಿಪೂರ್ತಿಗಾಗಿ ಸಂಸ್ಕೃತವನ್ನೂ ಪಾಠ್ಯಕ್ರಮದಲ್ಲಿ ಅಳವಡಿಸಿಕೊಂಡಿತು. “ಸಂಸ್ಕೃತದ ಧ್ವನಿ ಮತ್ತು ವ್ಯಾಕರಣ ವ್ಯವಸ್ಥೆ ವಿಶಿಷ್ಟವಾದುದು. ಅನ್ಯಭಾಷೆಗಳ ಅಧ್ಯಯನಕ್ಕೆ ಇದರಿಂದ ಬಲವಾದ ಅಡಿಪಾಯ ದೊರೆತಂತಾಗುತ್ತದೆ.” – ಇದು ಅಲ್ಲಿನ ವ್ಯವಸ್ಥಾಪಕರ ಅಭಿಪ್ರಾಯ.
ಇದಲ್ಲದೆ, ಆಸ್ಟ್ರೇಲಿಯಾದ ಎರಾಸ್ಮಸ್ ಸ್ಕೂಲ್ ಆಫ್ ಪ್ರೈಮರಿ ಎಜುಕೇಶನ್ ಎಂಬಲ್ಲಿಯೂ ಆರನೇ ತರಗತಿಯವರೆಗೆ ಸಂಸ್ಕೃತದ ಕಲಿಕೆಯಿದೆ. ವಿದ್ಯಾರ್ಥಿಗಳ ಬುದ್ಧಿವೃದ್ಧಿಗೆ ಸಂಸ್ಕೃತವು ವಿಪುಲಸ್ರೋತಸ್ಸುಗಳನ್ನೊದಗಿಸುತ್ತದೆಂದು ತನ್ನ ನಡೆಯನ್ನು ಸಮರ್ಥಿಸುತ್ತಿದೆ ಈ ಸಂಸ್ಥೆ.
ಸಾಮಾನ್ಯವಾಗಿ ನಾವು ಭಾಷೆಗಳನ್ನು ಕಲಿಯುವುದು ನಮ್ಮದ್ದೆಂಬ ಕಾರಣದಿಂದ ಅಥವಾ ವ್ಯಾವಹಾರಿಕ ಆವಶ್ಯಕತೆಗಳಿಂದ. ಆದರೆ, ಮೇಲ್ಕಾಣಿಸಿದೆಲ್ಲರಿಗೂ ಸಂಸ್ಕೃತಾಧ್ಯಯನಕ್ಕೆ ಇದರ ಉತ್ಕೃಷ್ಟಗುಣಗಳು ಮತ್ತು ಅದರಿಂದಾಗುವ ವಿಶೇಷಪ್ರಯೋಜನಗಳು ಕಾರಣವಾಗಿವೆಯೇ ಹೊರತು ಮತ್ತಾವುದೂ ಅಲ್ಲವೆಂಬುದನ್ನು ಇಲ್ಲಿ ನಾವು ಕಾಣಬೇಕಾದದ್ದು. ಇನ್ನೂ ವಿಶೇಷವೆಂದರೆ, ಆಸ್ಟ್ರೇಲಿಯಾದಲ್ಲಿ ಬಿ. ಎಸ್. ಕೆ. ಪ್ಲೇಮಿಂಗ್ಟನ್ ಎಂಬ ಸಂಸ್ಕೃತ ವಿದ್ಯಾಲಯವೂ ಆರಂಭಗೊಂಡಿದೆ. ೨೦೧೨ರ ಫೆಬ್ರವರಿಯಲ್ಲಿ ಆರಂಭಗೊಂಡ ಈ ವಿದ್ಯಾಲಯವು ಸಂಸ್ಕೃತ, ವೇದ, ವೇದಗಣಿತ, ಸಂಸ್ಕೃತವಿಜ್ಞಾನ – ಇತ್ಯಾದಿ ವಿಷಯಗಳನ್ನು ಬೋಧಿಸುತ್ತಿದೆ. ಭಾರತದ ಹೊರಗೆ ಆರಂಭಗೊಂಡ ಮೊತ್ತಮೊದಲ ಸಂಸ್ಕೃತವಿದ್ಯಾಲಯವೆಂಬ ಹಿರಿಮೆಗೂ ಇದು ಪಾತ್ರವಾಗಿದೆ.
ಸಂಸ್ಕೃತವು ಭಾರತೀಯತೆಯನ್ನು ರೂಪಿಸಿದ ಭಾಷೆ. ಆದರೆ ಆ ಭಾರತದಲ್ಲಿನ ಶಿಕ್ಷಣವ್ಯವಸ್ಥೆಯಲ್ಲಿ ಒಂದನೇ ತರಗತಿಯಿಂದಲೇ ಸಂಸ್ಕೃತಾಧ್ಯಯನ ಎಲ್ಲೂ ಇಲ್ಲ. ತದನಂತರದಲ್ಲಿಯೂ ಪಾಠ್ಯಕ್ರಮದಲ್ಲಿ ಇದಕ್ಕವಕಾಶವನ್ನೀಯದ ಶಾಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ಕೆಲವೆಡೆ ಇಡೀ ತಾಲೂಕು ಅಥವಾ ಜಿಲ್ಲೆಯಲ್ಲಿ ಸಂಸ್ಕೃತವಿರುವ ಒಂದು ಶಾಲೆಯೂ ಸಿಗಲಾರದು. ಇನ್ನು ಎಲ್ಲಾದರೂ ಸೌಭಾಗ್ಯವಶಾತ್ ಸರಕಾರ ಇದನ್ನು ವೈಕಲ್ಪಿಕ (optional) ಭಾಷೆಯಾಗಿಯಾದರೂ ಘೋಷಿಸಿದರೆ, ಅದನ್ನೂ ವಿರೋಧಿಸುವ ಪಂಡಿತಂಮನ್ಯರಿದ್ದಾರೆ. ಈ ಅಂಶಗಳನ್ನು ಮನಗಂಡಾಗ ಈಗಾಗಲೇ ಹೇಳಿದ ವಿದೇಶೀಯ ವಿದ್ಯಾಲಯಗಳ ಹಿರಿಮೆ ಸ್ಫುಟವಾದೀತು.
ಇದಿಷ್ಟು ಪ್ರಾಥಮಿಕಸ್ತರದ ಮಾತಾಯಿತು, ಇನ್ನು ಉನ್ನತಶಿಕ್ಷಣದಲ್ಲಂತೂ ೬೦ ದೇಶಗಳಲ್ಲಿನ ೪೬೦ ಸುಮಾರು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಾಧ್ಯಯನಕ್ಕೆ ಅವಕಾಶವಿದೆ. ಜರ್ಮನಿಯೊಂದರಲ್ಲೇ ೧೪ ವಿಶ್ವವಿದ್ಯಾಲಯಗಳು ಸಂಸ್ಕೃತವನ್ನು ಬೋಧಿಸುತ್ತಿವೆ. ಅಷ್ಟೇ ಅಲ್ಲದೆ, ಒಂದೊಂದು ವಿಶ್ವವಿದ್ಯಾಲಯವೂ ಸಂಸ್ಕೃತಕ್ಕೆ ಸಂಬಂಧಿಸಿದ ಹಲವಾರು ಕೋರ್ಸ್ ಗಳನ್ನು ನಡೆಸುತ್ತಿದೆ. ಉದಾಹರಣೆಗೆ, Australian National University ಯಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ೩೬ ವಿಭಿನ್ನ ಕೋರ್ಸ್ ಗಳಿವೆ. ಅಲ್ಲಿನ University of Sydney ಯಲ್ಲಿಯೂ ಇದೇ ಸಂಖ್ಯೆಯ ಕೋರ್ಸ್ ಗಳಿವೆ.
ಈ ವಿದೇಶೀಯ ವಿಶ್ವವಿದ್ಯಾಲಯಗಳಲ್ಲಿ ಹಲವೆಡೆ ಏಶ್ಯನ್ ಭಾಷೆಗಳ ಅಧ್ಯಯನ, ವಿದೇಶೀಯ ಭಾಷೆಗಳ ಅಧ್ಯಯನ – ಇತ್ಯಾದಿವಿಭಾಗಗಳ ಅಂತರ್ಗತವಾಗಿ, ಕೆಲವೆಡೆ ’ಪ್ರದರ್ಶನ’ದ ದೃಷ್ಟಿಯಿಂದ ಸಂಸ್ಕೃತಕ್ಕೂ ಅವಕಾಶವಿತ್ತಿರುವುದು ಹೌದಾದರೂ, ಅಲ್ಲೆಲ್ಲ ಹೆಚ್ಚು ಬೇಡಿಕೆಯಿರುವ ಭಾಷೆಗಳಲ್ಲಿ ಸಂಸ್ಕೃತವೂ ಅಗ್ರಪಂಕ್ತಿಯಲ್ಲಿದೆಯೆಂಬುದು ಸುಳ್ಳಲ್ಲ. ಉದಾಹರಣೆಗೆ, ಜರ್ಮನಿಯ ವಿಶ್ವವಿದ್ಯಾಲಯವೊಂದರಲ್ಲಿ ಪ್ರತಿವರ್ಷವೂ ನಡೆಯುವ ಸಮ್ಮರ್ ಸ್ಕೂಲ್ ನಲ್ಲಿ ಇಲ್ಲಿಯವರೆಗೆ ೩೪ ದೇಶಗಳಿಂದ ೨೫೪ ಮಂದಿ ಭಾಗವಹಿಸಿದ್ದಾರೆ. “ವ್ಯವಸ್ಥಾಸೌಕರ್ಯದ ದೃಷ್ಟಿಯಿಂದ ಆವೇದನೆಗೈದಿರುವ ಹಲವರನ್ನು ನಾವೇ ಬಿಡಬೇಕಾಗಿ ಬಂದಿದೆ” ಎಂದು ಇದರ ಸಂಚಾಲಕ ಡಾ. ಮಿಶೆಲ್ಸ್ ಹೇಳಿದ್ದಾರೆ.
ಇದಿಷ್ಟು ಔಪಚಾರಿಕಶಿಕ್ಷಣಕ್ಕೆ ಸಂಬಂಧಿಸಿದ್ದಾಯಿತು. ಈಗಂತೂ ಆನ್ ಲೈನ್ ತರಗತಿಗಳು, ಇನ್ನಿತರ C. D. ಮೊದಲಾದ ಮಾಧ್ಯಮಗಳಿಂದ ಕಲಿಯುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ವರ್ಧಿಸುತ್ತಿದೆ. ನನ್ನ ಮಿತ್ರರೊಬ್ಬರು ಅಂತರ್ಜಾಲಮುಖೇನ ನಡೆಸುತ್ತಿದ್ದ ’ಅಷ್ಟಾಧ್ಯಾಯೀಪರಿಚಯ’ ಪಾಠದಲ್ಲಿ ಸುಮಾರು ೨೦ರಷ್ಟು ವಿದೇಶೀಯ ವಿದ್ಯಾರ್ಥಿಗಳಿದ್ದರು. ಹೀಗೆ ಅಲ್ಲಲ್ಲಿ ಹಲವಾರು ವಿದ್ವಾಂಸರು ಕಾವ್ಯ, ವ್ಯಾಕರಣ, ಯೋಗ, ವೇದಾಂತ – ಇತ್ಯಾದಿ ವಿಷಯಗಳನ್ನು ಶಿಕ್ಷಣಸಂಸ್ಥೆಗಳ ಮೂಲಕ ಅಥವಾ ವೈಯಕ್ತಿಕವಾಗಿ ಅಂತರ್ಜಾಲದ ಮಾಧ್ಯಮದಿಂದ ಬೋಧಿಸುತ್ತಿದ್ದಾರೆ. ಈ ವಿಷಯಗಳಲ್ಲಿ ಆಗಾಗ ನಡೆಯುವ ನಿಯತಕಾಲಿಕ ಶಿಬಿರಗಳಲ್ಲಿ ಅಧ್ಯಾಪನಕ್ಕಾಗಿ ಹಲವಾರು ಭಾರತೀಯ ವಿದ್ವಾಂಸರು ವಿದೇಶಕ್ಕೆ ಹೋಗುತ್ತಿರುವುದೂ ಹೌದು.

ಇದೊಂದು ವಿಹಂಗಮದೃಷ್ಟಿಯಷ್ಟೇ. ಸಂಸ್ಕೃತವು ತನ್ನ ಗುಣೋತ್ಕರ್ಷದಿಂದಲೇ ಹೇಗೆ ಜಗತ್ತನ್ನು ತನ್ನೆಡೆಗೆ ಸೆಳೆಯುತ್ತಿದೆಯೆಂಬುದಕ್ಕೆ ಕೆಲವೊಂದು ದೃಷ್ಟಾಂತಗಳನ್ನಿತ್ತಿದ್ದೇನೆ. ಇಂತು ಸತ್ತ್ವಾತಿಶಯದಿಂದ ಕೂಡಿದ ಈ ಭಾಷೆ ಅವನಿಯಲ್ಲಿ ಅಜರಾಮರವಾಗಿಯೇ ಇರಲಿದೆ. ಸತ್ತ್ವಯುತವಾದದ್ದಕ್ಕೆ ಸಾವಿಲ್ಲ. ಅದನ್ನುಳಿಸಲು ಯಾರದ್ದೂ ಶಿಫಾರಸ್ಸು, ಔದಾರ್ಯ – ಇತ್ಯಾದಿಗಳು ಬೇಕಿಲ್ಲ. ನಮ್ಮ ವೈಯಕ್ತಿಕ ಅಭ್ಯುನ್ನತಿಗಾಗಿ, ಸಾಮಾಜಿಕಸಾಮರಸ್ಯಕ್ಕಾಗಿ ಮತ್ತು ರಾಷ್ಟ್ರವನ್ನು ಕಾಡುತ್ತಿರುವ ಭಾವೈಕ್ಯರಾಹಿತ್ಯವೇ ಮೊದಲಾದ ಸಮಸ್ಯೆಗಳ ನಿವಾರಣೆಗಾಗಿ ಸಂಸ್ಕೃತವನ್ನು ಆಶ್ರಯಿಸುವ ಆವಶ್ಯಕತೆ ವರ್ತಮಾನಸಮಾಜಕ್ಕಿದೆ. ಅದನ್ನು ನಾವೆಲ್ಲರೂ ಅರಿತು ಜೀವನಸಾರ್ಥಕ್ಯವನ್ನು ಕಂಡುಕೊಳ್ಳುವಂತೆ ಸಂಸ್ಕೃತಮಾತೆಯು ಅನುಗ್ರಹಿಸಲಿ.

No comments:

Post a Comment