Thursday 12 January 2017

ವಿದೇಶೀಯವಿದ್ವಾಂಸರ ಸಂಸ್ಕೃತಕವಿತಾಪಟುತ್ವ

ಸಂಸ್ಕೃತದೊಂದಿಗಿನ ವಿದೇಶೀಯರ ಸಂಬಂಧ ನಾನಾರೂಪವಾದದ್ದು. ಇಲ್ಲಿನ ವಿದ್ಯೆಗಳಲ್ಲಿ ಪಾಂಡಿತ್ಯ ಪಡೆದು ಸಂಶೋಧನೆಗಳನ್ನೂ ನಡೆಸಿರುವ ಮಹನೀಯರು ಹಲವರಿದ್ದಾರೆ. (ತಮ್ಮ ಪಾಂಡಿತ್ಯ-ಸಂಶೋಧನೆಗಳನ್ನು ಸಂಸ್ಕೃತಕ್ಕೆ ಮಾರಕವಾಗಿಯೂ ಉಪಯೋಗಿಸಿದವರು / ಉಪಯೋಗಿಸುತ್ತಿರುವವರು ಕಡಮೆಯಿಲ್ಲ ಬಿಡಿ !) ಅಂಥವರಲ್ಲಿ ಕವಿತ್ವದಿಂದಲೂ ಇಷ್ಟವಾಗುವವರು ಇಂಗ್ಲೆಂಡಿನ ಎಚ್. ಎಸ್. ವಿಲ್ಸನ್ ಎಂಬವರು. ಅವರಿಗೂ ಭಾರತೀಯವಿದ್ವಾಂಸರೊಬ್ಬರಿಗೂ ಪತ್ರದ ಮೂಲಕ ನಡೆದ ಕಾವ್ಯಮಯಸಂವಾದ ಅತ್ಯಂತ ರಮಣೀಯವಾದದ್ದು. ಆದರೆ ಈ ಸಂವಾದ ದುಃಸ್ಥಿತಿಯೊಂದಕ್ಕೆ ಸಾಕ್ಷಿಯಾಗಿರುವುದನ್ನು ಕಂಡಾಗ ಆಗುವ ಸಂಕಟವೂ ಅನಿರ್ವಾಚ್ಯ. ಆ ಪ್ರಸಂಗ ಮತ್ತು ಸಂವಾದ ಇಂತಿದೆ
ಬ್ರಿಟಿಷರ ಆಳ್ವಿಕೆಯಲ್ಲಿ ಮೆಕಾಲೆಯ ವರದಿಯ ಪ್ರಕಾರ ಎಲ್ಲೆಡೆ ಭಾರತೀಯಶಿಕ್ಷಣಕ್ಕಾದ ದುರ್ದಶೆಯ ಇತಿಹಾಸ ಎಲ್ಲರಿಗೂ ತಿಳಿದಿದೆಯಷ್ಟೇ ! ಆ ಕಾಲದಲ್ಲಿ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕನು ೧೮೩೫ರ ಆಸುಪಾಸಿನಲ್ಲಿ ಅನೇಕ ಸ್ವದೇಶಿವಿದ್ಯಾಸಂಸ್ಥೆಗಳನ್ನು ಕಠೋರವಾಗಿ ಮುಚ್ಚಿಸಿದ. ಹಾಗೆ ಮುಚ್ಚಲ್ಪಟ್ಟ ವಿದ್ಯಾಕೇಂದ್ರಗಳಲ್ಲಿ ಕಲ್ಕತ್ತದಗೋಳೀಶ್ರೀಎಂಬಲ್ಲಿರುವ ಸಂಸ್ಕೃತಪಾಠಶಾಲೆಯೂ ಒಂದು. ಇದರಿಂದ ದುಃಖಿತರಾದ ಆ ಪಾಠಶಾಲೆಯ ಕುಲಪತಿ ಪ್ರೇಮಚಂದ್ರವಾಗೀಶರು ಎಚ್. ಎಸ್. ವಿಲ್ಸನ್ ಎಂಬವರಿಗೆ ಈ ದುಃಸ್ಥಿತಿಯನ್ನು ವಿವರಿಸುವ ಪದ್ಯವೊಂದನ್ನು ಬರೆದು ಪತ್ರಮುಖೇನ ಕಳುಹಿಸಿದರು. ಎಚ್. ಎಸ್. ವಿಲ್ಸನರು ಆಗಿನ ಸುಪ್ರಸಿದ್ಧ ಸಂಸ್ಕೃತವಿದ್ವಾಂಸರಷ್ಟೇ ಅಲ್ಲದೆ, ಆ ಪಾಠಶಾಲೆಯ ಅನೇಕ ಅಧ್ಯಾಪಕರನ್ನು ನಿಯುಕ್ತಿಗೊಳಿಸಿದವರೂ ಆಗಿದ್ದರಿಂದ, ಈ ವೃತ್ತಾಂತವನ್ನು ಅವರಿಗೆ ತಿಳುಹುವುದು ಸೂಕ್ತವೇ ಆಗಿತ್ತು. ಆ ಪದ್ಯ
ಅಸ್ಮಿನ್ ಸಂಸ್ಕೃತಪಾಠಪದ್ಮಸರಸಿ ತ್ವತ್ಸ್ಥಾಪಿತಾ ಯೇ ಸುಧೀ-
            ಹಂಸಾಃ ಕಾಲವಶೇನ ಪಕ್ಷರಹಿತಾ ದೂರಂಗತೇ ತೇ ತ್ವಯಿ |
ತತ್ತೀರೇ ನಿವಸಂತಿ ಸಂಹತಶರಾ ವ್ಯಾಧಾಸ್ತದುಚ್ಛಿತ್ತಯೇ
            ತೇಭ್ಯಸ್ತ್ವಂ ಯದಿ ಪಾಸಿ ಪಾಲಕ ತದಾ ಕೀರ್ತಿಶ್ಚಿರಂ ಸ್ಥಾಸ್ಯತಿ ||
(ಈ ಸಂಸ್ಕೃತಪಾಠಶಾಲೆಯೆಂಬ ಸರೋವರದಲ್ಲಿ ನಿನ್ನಿಂದ ಸ್ಥಾಪಿಸಲ್ಪಟ್ಟ ಪಂಡಿತರೆಂಬ ಹಂಸಗಳು ಈಗ ರೆಕ್ಕೆಯಿಲ್ಲದವುಗಳಾಗಿವೆ. ಅವುಗಳ ನಾಶಕ್ಕಾಗಿ ಬೇಡರು ದಡದಲ್ಲಿಯೇ ಬೀಡುಬಿಟ್ಟಿದ್ದಾರೆ. ಅಯ್ಯಾ ಪಾಲಕನೇ! ಅವರಿಂದ ನೀನು ರಕ್ಷಿಸಿದೆಯಾದಲ್ಲಿ ನಿನ್ನ ಕೀರ್ತಿ ಚಿರಕಾಲ ನಿಲ್ಲುವುದು.)
ಈ ನಿವೇದನೆಗೆ ವಿಲ್ಸನರ ಉತ್ತರ
ವಿಧಾತಾ ವಿಶ್ವನಿರ್ಮಾತಾ ಹಂಸಸ್ತತ್ಪ್ರಿಯವಾಹನಮ್ |
ಅತಃ ಪ್ರಿಯತರತ್ವೇನ ರಕ್ಷಿಷ್ಯತಿ ಸ ಏವ ತತ್ ||
ಅಮೃತಂ ಮಧುರಂ ಸಮ್ಯಕ್ ಸಂಸ್ಕೃತಂ ಹಿ ತತೋಽಧಿಕಮ್ |
ದೇವಭೋಗ್ಯಮಿದಂ ಯಸ್ಮಾದ್ ದೇವಭಾಷೇತಿ ಕಥ್ಯತೇ ||
ನ ಜಾನೇ ವಿದ್ಯತೇ ಕಿಂಚಿನ್ಮಾಧುರ್ಯಮಿಹ ಸಂಸ್ಕೃತೇ |
ಸರ್ವದೈವ ಸಮುನ್ಮತ್ತಾ ಯೇನ ವೈದೇಶಿಕಾ ವಯಮ್ ||
ಯಾವದ್ ಭಾರತವರ್ಷಂ ಸ್ಯಾದ್ ಯಾವದ್ ವಿಂಧ್ಯಹಿಮಾಚಲೌ |
ಯಾವದ್ ಗಂಗಾ ಚ ಗೋದಾ ಚ ತಾವದೇವ ಹಿ ಸಂಸ್ಕೃತಮ್ ||
(ಹಂಸವು ಸೃಷ್ಟಿಕರ್ತ ಬ್ರಹ್ಮನ ವಾಹನ ತಾನೇ! ಆದ್ದರಿಂದ ತನ್ನ ಪ್ರಿಯವಾಹನವನ್ನು ಆತನೇ ರಕ್ಷಿಸುತ್ತಾನೆ. ಸುಧೆಯು ಮಧುರ. ಅದಕ್ಕಿಂತಲೂ ಸಂಸ್ಕೃತವು ಮಧುರ. ದೇವತೆಗಳಿಂದಲೂ ಸೇವಿಸಲ್ಪಡುವುದರಿಂದಾಗಿ ಇದು ದೇವಭಾಷೆಯೆನಿಸಿದೆ. ಈ ಸಂಸ್ಕೃತದಲ್ಲದಾವ ಸೊಗಸಿದೆಯೋ ತಿಳಿಯೆ. ಏಕೆಂದರೆ, ವೈದೇಶಿಕರಾದ ನಾವೂ ಇದನ್ನಾಸ್ವಾದಿಸುತ್ತಾ ಮತ್ತರಾಗಿದ್ದೇವೆ. ಎಲ್ಲಿಯವರೆಗೆ ಭಾರತವರ್ಷವಿರುವುದೋ, ಎಲ್ಲಿಯವರೆಗೆ ವಿಂಧ್ಯಹಿಮಾಚಲಗಳೂ ಗಂಗಾಗೋದಾವರಿಗಳೂ ಇರುವವೋ, ಅಲ್ಲಿಯವರೆಗೂ ಸಂಸ್ಕೃತವಿರುವುದು.)
ವಿಲ್ಸನರ ಈ ಉತ್ತರದಲ್ಲಿ ವ್ಯಕ್ತವಾದ ಭಾವ ಪ್ರಿಯವಾಗುವಂಥದ್ದೇ. ಆದರೂ ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಅಲ್ಲಿರಲಿಲ್ಲವಾದ್ದರಿಂದ ಪ್ರೇಮಚಂದ್ರರು ಮತ್ತೆ ತಮ್ಮ ದೈನ್ಯವನ್ನು ತೋಡಿಕೊಂಡರು
ಗೋಳೀಶ್ರೀದೀರ್ಘಿಕಾಯಾಂ ಬಹುವಿಟಪಿತಟೇ ಕಾಲಿಖಾತಾನಗರ್ಯಾಂ
ನಿಃಸಂಗೋ ವರ್ತತೇ ಸಂಸ್ಕೃತಪಠನಮಹಾಸದ್ಗೃಹಾಖ್ಯಃ ಕುರಂಗಃ |
ಹಂತುಂ ತಂ ಭೀತಚಿತ್ತಂ ವಿಧೃತಖರಶರೋ ಮೇಕಲೇವ್ಯಾಧರಾಜಃ
ಸಾಶ್ರುರ್ಬ್ರೂತೇ ಸ ಭೋ ಭೋಃ ಸುವಿಸಲನಮಹಾಭಾಗ ಮಾಂ ರಕ್ಷ ರಕ್ಷ ||
(ಕಲ್ಕತ್ತಾನಗರಿಯಲ್ಲಿ ಗೋಳೀಶ್ರೀ ಎಂಬ ಸರಸಿಯ ತೀರದ ಬಹುವೃಕ್ಷಗಳಿರುವ ತಾಣದಲ್ಲಿ ಸಂಸ್ಕೃತವಿದ್ಯಾಲಯವೆಂಬ ಜಿಂಕೆಯು ತನ್ನ ಪಾಡಿಗೆ ತಾನಿದ್ದುಕೊಂಡಿದೆ. ಅದನ್ನು ಕೊಲ್ಲಲು ಮೆಕಾಲೆ ಎಂಬ ಬೇಡರೊಡೆಯನು ಕೂರ್ಗಣೆಯ ಹೂಡಿ ನಿಂತಿದ್ದಾನೆ. ಆ ಜಿಂಕೆಯು ಪನಿಗಣ್ಣಾಗಿ ಅಯ್ಯಾ ! ವಿಲ್ಸನ್ ಮಹಾನುಭಾವನೇ ! ರಕ್ಷಿಸು ರಕ್ಷಿಸು ಎಂದು ಗೋಳಿಡುತ್ತಿದೆ.)
ಇದಕ್ಕೆ ವಿಲ್ಸನರ ಪ್ರತಿಕ್ರಿಯೆ
ನಿಷ್ಪಿಷ್ಟಾಪಿ ಪರಂ ಪದಾಹತಿಶತೈಃ ಶಶ್ವದ್ ಬಹುಪ್ರಾಣಿನಾಂ
            ಸಂತಪ್ತಾಪಿ ಕರೈಃ ಸಹಸ್ರಕಿರಣೇನಾಗ್ನಿಸ್ಫುಲಿಂಗೋಪಮೈಃ |
ಛಾಗಾದ್ಯೈಶ್ಚ ವಿಚರ್ವಿತಾಪಿ ಸತತಂ ಮೃಷ್ಟಾಪಿ ಕುದ್ದಾಲಕೈಃ
ದೂರ್ವಾ ನ ಮ್ರಿಯತೇ ತಥಾಪಿ ನಿತರಾಂ ಧಾತುರ್ದಯಾ ದುರ್ಬಲೇ ||
(ನಿತ್ಯವೂ ನೂರಾರು ಪ್ರಾಣಿಗಳ ಕಾಲ್ತುಳಿತದಿಂದ ನವೆದಿದ್ದರೂ, ಬೆಂಕಿಯ ಕಿಡಿಗಳಂತಿರುವ ರವಿಕಿರಣಗಳಿಂದ ಬೆಂದಿದ್ದರೂ, ಆಡು ಮೊದಲಾದವುಗಳಿಂದ ಜಗಿಯಲ್ಪಟ್ಟರೂ, ಗುದ್ದಲಿಗಳಿಂದ ಹೊಡೆಯಲ್ಪಟ್ಟರೂ ಗರಿಕೆ ಸಾಯುವುದಿಲ್ಲ. ದುರ್ಬಲರಲ್ಲಿ ವಿಧಿಯ ಒಲವು ಅತಿಶಯಿತವಾದದ್ದು !)
      ಅತ್ಯುತ್ಕೃಷ್ಟವಾದ ಈ ಪದ್ಯ ನಿಶ್ಚಿತವಾಗಿಯೂ ಆಚಂದ್ರಾರ್ಕಸ್ಥಾಯಿ. ಮುಂದೆ ಅವರಿಂದ ನೆರವು ಒದಗಿತೋ ಇಲ್ಲವೋ ತಿಳಿದುಬಂದಿಲ್ಲ. ಆದರೆ, ಆ ಕಾಲದಲ್ಲಿ ಸಂಸ್ಕೃತಕ್ಕೆರಗಿದ್ದ ವಿಪತ್ತಿ, ಭಾರತೀಯರ ಅಸಹಾಯಕತೆ, ಮೆಕಾಲೆ ಮೊದಲಾದವರ ಧೂರ್ತತೆ ಇವೆಲ್ಲದಕ್ಕೆ ಸಾಕ್ಷಿಯಾಗಿರುವ ಈ ಛಂದಃಸಂವಾದ, ವಿದೇಶೀಯವಿದ್ವಾಂಸರ ಕವಿತಾಪಟುತ್ವಕ್ಕೂ ಉತ್ತಮ ಉದಾಹರಣೆಯಾಗಿ ನೆಲೆ ನಿಂತಿದೆಯೆಂಬುದರಲ್ಲಿ ಎರಡು ಮಾತಿಲ್ಲ.


No comments:

Post a Comment