Thursday 9 February 2017

ದುರ್ಯೋಧನಾಂತರಂಗಮ್

ರಣಾಂಗಣದಿಂದ ಪಲಾಯನಗೈಯುತ್ತಿರುವ ದುರ್ಯೋಧನನ ವರ್ಣನೆ.
ಹಿಂದೊಮ್ಮೆ ರಚಿಸಿ, ಪದ್ಯಪಾನವೆಂಬ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದ ಪದ್ಯಗಳಿವು.
ಮೊದಲ ನಾಲ್ಕು ಪದ್ಯಗಳು ಮತ್ತೇಭವಿಕ್ರೀಡಿತ, ಐದನೆಯದ್ದು ಮಹಾಸ್ರಗ್ಧರಾ ಮತ್ತು
ಆರನೆಯದ್ದು ಕಂದ.

ಫಡ ! ಕುನ್ನೀ ! ರಣಹೇಡಿ ! ನಿಲ್ಲೆನುತೆ ರೌದ್ರಾವೇಶಘೋಷಂಗಳಿಂ
ಗುಡುಗುತ್ತುಂ ಪವನಾತ್ಮಜಂ ಬಿಡದೆ ಬೆನ್ನಟ್ಟಲ್ಕೆ ಕಾಡ್ಗಿಚ್ಚವೋಲ್ |
ನಡುಗುತ್ತುಂ ಪೊಣರಲ್ಕಸಾಧ್ಯಮೆನುತುಂ ದುರ್ಯೋಧನಂ ನೋಂತು ಮೇಣ್
ನಡೆದಂ ವೇಗದಿನೈಂದ್ರದಿಕ್ಕಿನೆಡೆಗಂ ಸಂಭೀತಿಶೋಕಾಕುಲಮ್ ||೧||

ಘನಸಿಂಹಾಸನಮೇಂ ? ಸರತ್ನಪಥಮೇಂ ? ಪೊಂದೇರ್ಗಳೇಂ ? ಅಂಗನಾ-
ಗಣಗಾನಾದಿಗಳೇಂ ? ಪೊಗಳ್ವ ಭಟರೇಂ ? ವೈನೋದಮೇಂ ? ಮೋದಮೇಂ ?
ಇನಿತುಂ ವೈಭವಶಾಲಿಯೀಗಳಸುಗೆಟ್ಟೇಕಾಂಗಿಯಾಗಿರ್ಪೆನೆಂ-
ದೆನುತುಂ ಕಂಬನಿದುಂಬಿ ತಾಂ ಜರುಗಿದಂ ಸಂಭ್ರಾಂತಸರ್ಪಧ್ವಜಂ ||೨||

ಕೊಳೆಯುತ್ತಿರ್ಪ ಕಳೇವರಾಳಿ ಧರಣೀದೌರ್ಭಾಗ್ಯಸಂಕೇತಮೇಂ ?
ಕಳಿವಣ್ ಮಾಮಕಪಾಪಪಾದಪದಿದೆಂದೆನ್ನುತ್ತೆ ಗೋಳಾಡಿದಂ |
ಹಳಿದಂ ದುರ್ವಿಧಿಯಂ ಮನಕ್ಕೆ ಮುಳಿದಂ ಹಮ್ಮೈಸಿ ಬೀಳುತ್ತೆ ಕ-
ಟ್ಟಳಲಿಂದಂ ಪುಯಿಲಿಟ್ಟು ಬಾನ್ ಬಿರಿಯೆ ಮೇಣ್ ಒರ್ವೊರ್ವರಂ ಕಾಣುತುಂ ||೩||

ಅರರೇ ! ಕರ್ಣ ! ಸುಹೃದ್ಯ ! ನಿನ್ನ ಬಲಿಗೊಟ್ಟೆಂ ಸ್ವಾರ್ಥಕಂ, ಹಾ ! ಸಹೋ-
ದರ ದುಃಶಾಸನ ! ಮೀರುತುಂ ಸರದಿಯಂ ನೀಂ ಮುನ್ನಮೇ ಪೋದೆಯೇಂ ?
ತರಳಾ ! ಘಾತಕನಾದೆನಾಂ ಪಿತನುಮೆಂದಾ ಕಾಯಮಂ ಗೊಂಡು ತ-
ನ್ನುರಕೊತ್ತುತ್ತೆ ಪಲುಂಬಿದಂ ಮಗುಳೆಯೇಳ್ದಂ ರೋಷರಕ್ತೇಕ್ಷಣಂ ||೪||

ಪುಸಿಯಲ್ತೆನ್ನ ಪ್ರತಾಪಂ ವಿಧುತವಿತತವಿಶ್ವಂಭರಾಧೀರಸತ್ತ್ವಂ
ಮಿಸುಗುತ್ತಿರ್ಪಾ ಪೃಥಾಪುತ್ರರ ತಲೆಗಡಿವೆಂ ಮತ್ತೆ ವಾತಾತ್ಮಜೀಯಂ |
ಬಸಿರಂ ಬಿಚ್ಚಿ ದ್ರುತಂ ನೂರ್ವರುಮನನುಜರಂ ಪಿಂದೆಗೊಂಡೆನ್ನ ಸೇಡಂ
ಪೊಸೆವೆಂ ನಾನೆನ್ನುತಾಗಳ್ ಘುಡುಘುಡಿಸಿದನಾ ಭೈರವಂ ಧಾರ್ತರಾಷ್ಟ್ರಂ ||೫||

ಭೂಪಂ ಪರಿಪರಿಯಿಂತು ವಿ-
ಲಾಪಿಸುತುಂ ಪೋರೆ ಕಾಯ್ವೆನಾಂ ಕಾಲಮನೆಂ-
ದಾ ಪರ್ಯಂತಂ ಕಾಯಲ್
ದ್ವೈಪಾಯನನಾಮಸರಸಿಯೆಡೆಗಂ ನಡೆದಂ ||೬||

No comments:

Post a Comment