Thursday 9 February 2017

ಶ್ರೀಯುತ ಕಡವ ಶಂಭು ಶರ್ಮರ ಭಗವದ್ಗೀತೆಯ ಕನ್ನಡಾನುವಾದ

ಶ್ರೀಯುತ ಕಡವ ಶಂಭು ಶರ್ಮರ ಭಗವದ್ಗೀತೆಯ ಕನ್ನಡಾನುವಾದ

ಪ್ರಪಂಚದ ನಾನಾಭಾಷೆಗಳಲ್ಲಿ ಗೀತೆಯ ಅನುವಾದ ಸಾರಸಂಗ್ರಹ ಇತ್ಯಾದಿ ರೂಪವಾಗಿ ಬಂದಿರುವ ಗ್ರಂಥಗಳ ಸಂಖ್ಯೆ ಲೆಖ್ಖವಿಡಲಾಗದಷ್ಟು. ಕನ್ನಡದಲ್ಲಿಯೂ ಗೀತೆಯ ಕುರಿತಾದ ಪುಸ್ತಕಗಳು ಬಹುಸಂಖ್ಯಾಕ. ಹಲವರು ಗದ್ಯಾನುವಾದವನ್ನೋ ವಿಸ್ತೃತವಿವರಣೆಗಳನ್ನೋ ವಿಶಿಷ್ಟದೃಷ್ಟಿಯ ವಿಮರ್ಶೆಗಳನ್ನೋ ನೀಡಿದರೆ, ಇನ್ನು ಕೆಲವರು ಪದ್ಯಾನುವಾದಗಳನ್ನೇ ಮಾಡಿದವರಿದ್ದಾರೆ. ಕನ್ನಡಕವಿಶ್ರೇಷ್ಠರಾದ ಪಂಪ-ಕುಮಾರವ್ಯಾಸರು ಪ್ರಾಸಂಗಿಕವಾಗಿ ಗೀತೆಯನ್ನು ನಿರೂಪಿಸಿದರೆ, ನಾಗರಸಕವಿಯು ಭಾಮಿನೀಷಟ್ಪದಿಯಲ್ಲಿ, ಶಿವಾನಂದಸ್ವಾಮಿಯವರು ಮತ್ತು ಎ. ಜಿ. ಕೃಷ್ಣರಾಯರು ವಾರ್ಧಕಷಟ್ಪದಿಯಲ್ಲಿ, ಪೆರುಮುಂಡ ಗಣಪತಿ ಭಟ್ಟರು ಭಾಮಿನೀಷಟ್ಪದಿಯಲ್ಲಿ ಮತ್ತು ವಿಜಯನಾಥಭಟ್ಟರು ಚೌಪದಿಯಲ್ಲಿ - ಹೀಗೆ ನಾನಾಕವಿಗಳು ಪತಿಪದ್ಯವನ್ನೂ ಸೊಗಸಾಗಿ ಅನುವಾದಿಸಿದ್ದಾರೆ. ಈ ಅನುವಾದಕರಲ್ಲಿ ಕಡವ ಶಂಭು ಶರ್ಮರೂ ಓರ್ವರು. ಅವರು ಮೂಲದ ಅನುಷ್ಟುಪ್ ಛಂದಸ್ಸಿನಲ್ಲಿಯೇ ಅನುವಾದಿಸಿರುವುದು ವಿಶೇಷ. ಡಾ. ಶ್ರೀಧರ ಹೆಚ್. ಜಿ. ಯವರು ಸಂಪಾದಿಸಿ, ಪುತ್ತೂರಿನ ಕಡವ ಶಂಭು ಶರ್ಮ ಪ್ರತಿಷ್ಠಾನದಿಂದ ಪ್ರಕಾಶಿತವಾಗಿರುವ ಈ ಅನುವಾದದ ಕೆಲವು ಪದ್ಯಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಮನಸ್ಸಾದುದರಿಂದ ಈ ಪ್ರವೃತ್ತಿ.

ಪ್ರಥಮ ಶ್ಲೋಕ –
ಧರ್ಮಕ್ಷೇತ್ರೇ ಕುರುಕ್ಷೇತ್ರೇ ...

ಅನುವಾದ –
ಅರದಿರ್ಕೆ ಕುರುಕ್ಷೇತ್ರಂ ಅಲ್ಲಿ ಪೋರಲ್ಕೆ ಸೇರ್ದವರ್ |
ಪಾಂಡುಪುತ್ರರ್ ನನ್ನವರುಂ ಏಂ ಮಾಡಿದರೊ ಸಂಜಯ ||

ಇಲ್ಲಿ ಮೂಲದ ಧರ್ಮಕ್ಷೇತ್ರ ಅರದಿರ್ಕೆ ಎಂದಾಗಿದೆ. ಸಮವೇತಾ ಯುಯುತ್ಸವಃ - ಪೋರಲ್ಕೆ ಸೇರ್ದವರ್. ಹೀಗೆ ಮೂಲಚ್ಛಂದಸ್ಸಿನ ಸೊಗಸಿನಲ್ಲಿಯೇ ಅಚ್ಚಗನ್ನಡದ ಪದಗಳಿಂದ ಈ ಶ್ಲೋಕ ಮೂಡಿದೆ.

ಗಾಂಡೀವಂ ಸ್ರಂಸತೇ ಹಸ್ತಾತ್ ...

ಕಯ್ಯಿಂ ಬೀಳ್ವುದು ಗಾಂಡೀವಂ ತೊವಲುಂ ಪೊತ್ತುತಿರ್ಪುದು |
ಸುತ್ತುವಂತೆನ್ನ ಬಗೆಯುಂ ನಿಲಲಾರ್ತನುಮಿಲ್ಲ ನಾಂ ||

ಇನ್ನು ಅತ್ಯಂತ ಪ್ರಸಿದ್ಧ ಯದಾ ಯದಾ ಹಿ ಧರ್ಮಸ್ಯ ಶ್ಲೋಕ ಶರ್ಮರ ಮುಖದಲ್ಲಿ ಇಂತು ಮೂಡಿದೆ –
ಎಂದೆಂದಾದಪುದೋ ಪಾರ್ಥ ಸಲೆ ಧರ್ಮಕ್ಕೆ ಬಾಡಿಕೆ |
ಅಧರ್ಮಕ್ಕೇಳ್ಗೆಯಾದಾಗಳ್ ತನ್ನಂ ಪುಟ್ಟಿಸಿಕೊಂಬೆನಾಂ ||

ಕೊನೆಯದಾಗಿ, ನನಗೆ ಅತ್ಯಂತ ಪ್ರಿಯವಾದ “ಆಪೂರ್ಯಮಾಣಮಚಲಪ್ರತಿಷ್ಠಂ” ಎಂಬ ದ್ವಿತೀಯಾಧ್ಯಾಯದ ೭೦ನೇ ಶ್ಲೋಕದ ಅನುವಾದ –
ತುಂಬುತ್ತಿರ್ಪಲ್ಲಾಡದೂರ್ದಿರ್ಕೆಯುಳ್ಳ
ಮುನ್ನೀರಂ ನೀರ್ ಪುಗುವಂತೆಲ್ಲ ಕಾಮಂ |
ಆರಂ ಕಾಮಂ ಪುಗುಗುಂ ಶಾಂತಿಯಂ ತಾಂ
ಸೇರ್ಗುಂ ಕಾಮಕ್ಕಾಟಿಪಂ ಪೊರ್ದಲಾರಂ ||

ಈ ಎಲ್ಲಾ ಪದ್ಯಗಳಲ್ಲಿಯೂ ಕನ್ನಡದ ಸೊಗಸು ತಾನಾಗಿಯೇ ನೆಲೆ ನಿಂತಂತಿದೆ. ಸಮುಚಿತಪದವಿನ್ಯಾಸಗಳಿಂದ ಪ್ರತಿಪದ್ಯವೂ ಶಿಲ್ಪವಾಗಿ ಮೂಡಿದೆ.
ಇಂತಹ ಅನುವಾದವನ್ನಿತ್ತ ಶರ್ಮರಿಗೆ ಈ ಗೀತಾಜಯಂತಿಯ ಸುಸಮಯದಲ್ಲಿ ನಮನಗಳು.

ಎಲ್ಲರಿಗೂ ಗೀತಾಜಯಂತಿಯ ಶುಭಾಶಯಗಳು :-)

No comments:

Post a Comment